ದೊಡ್ಡಬಳ್ಳಾಪುರ: ತಾಲ್ಲೂಕಿನ ಹುಲಿಕುಂಟೆ ಸುತ್ತಮುತ್ತಲಿನ ಗ್ರಾಮಗಳ 1,012 ಎಕರೆ ಭೂಮಿಯನ್ನು ಕೆಐಎಡಿಬಿ (KIADB) ಸ್ವಾಧೀನಕ್ಕೆ ಅಧಿಸೂಚನೆ ಪ್ರಕಟಿಸಿದ್ದು, ಶುಕ್ರವಾರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರ ಅಧ್ಯಕ್ಷತೆಯಲ್ಲಿ ಭೂಪರಿಹಾರ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಹುಲಿಕುಂಟೆ ಭಾಗದ ರೈತರು ‘ಈಗಾಗಲೇ ಹುಲಿಕುಂಟೆ ಸುತ್ತಮುತ್ತ ಕೆಐಎಡಿಬಿ ಸುಮಾರು 450 ಎಕರೆ ಭೂಸ್ವಾಧೀನ ಮಾಡಿಕೊಂಡಿದೆ. ಹಾಗಾಗಿ ಮತ್ತೆ ನಮ್ಮ ಗ್ರಾಮದ ಸುತ್ತಲಿನ ಫಲವತ್ತಾದ ಕೃಷಿ ಭೂಮಿಯನ್ನೇ ಸ್ವಾಧಿನ ಮಾಡಿಕೊಳ್ಳುತ್ತಿರುವುದಕ್ಕೆ ನಮ್ಮ ತೀವ್ರ ವಿರೋಧ ಇದೆ. ಈ ಬಗ್ಗೆ ಹೋರಾಟಗಳನ್ನು ರೂಪಿಸಲಾಗುವುದು ಎಂದು ರೈತರು ಹೇಳಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ದೇಶದ ಪ್ರಗತಿಗೆ ಕೃಷಿ, ಕೈಗಾರಿಕೆ ಎರಡೂ ಸಹ ಮುಖ್ಯವಾಗಿವೆ. ದೇವನಹಳ್ಳಿ ಸಮೀಪ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯಾದ ನಂತರ ಈ ಭಾಗದ ತಾಲ್ಲೂಕುಗಳಲ್ಲೇ ಕೈಗಾರಿಕೆಗಳ ಸ್ಥಾಪನೆಗೆ ಸ್ಥಳ ನೀಡುವಂತೆ ಕೈಗಾರಿಕೋದ್ಯಮಿಗಳ ಬೇಡಿಕೆಯಾಗಿದೆ.
ಅಲ್ಲದೆ ಈ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗುವುದರಿಂದ ವಿದ್ಯಾವಂತ ಯುವ ಸಮೂಹಕ್ಕು ಅವರ ಅರ್ಹತೆಗೆ ತಂಕ್ಕಂತೆ ಉನ್ನತ ಉದ್ಯೋಗಗಳು ದೊರೆಯಲಿವೆ ಎಂದರು.
ಹುಲಿಕುಂಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೂರು ವರ್ಷಗಳಿಂದ ಮಾರಾಟವಾಗಿರುವ ಜಮೀನುಗಳ ಬೆಲೆ, ಸರ್ಕಾರದ ಮಾರ್ಗಸೂಚಿ ಬೆಲೆ ಹಾಗೂ ಪ್ರಸ್ತುತ ಮಾರುಕಟ್ಟೆ ಬೆಲೆ ಈ ಎಲ್ಲವನ್ನು ಆಧಾರವಾಗಿಟ್ಟುಕೊಂಡು ಹುಲಿಕುಂಟೆ ರಸ್ತೆ ಭಾಗದಲ್ಲಿನ ಒಂದು ಎಕರೆ ಜಮೀನಿಗೆ ₹2.75 ಕೋಟಿ, ರಸ್ತೆಯಿಂದ ಹಿಂದಕ್ಕೆ ಇರುವ ಒಂದು ಎಕರೆ ಜಮೀನಿಗೆ ₹1.55 ಕೋಟಿ ಹಾಗೂ ದೊಡ್ಡಮಂಕಲಾಳ ಗ್ರಾಮದ ಒಂದು ಎಕರೆ ಜಮೀನಿಗೆ ₹1.25 ಕೋಟಿ ಭೂಪರಿಹಾರ ನಿಗದಿ ಮಾಡಲಾಗಿದೆ. ಈ ಬಗ್ಗೆ ರೈತರಿಗೆ ಅಸಮಧಾನ ಇದ್ದರೆ ಕೆಐಎಡಿಬಿ ಮುಂದೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಸಭೆಯಲ್ಲಿ ಕೆಐಎಡಿಬಿ ಭೂಸ್ವಾಧೀನ ಅಧಿಕಾರಿ ಬಾಳಪ್ಪ ಇದ್ದರು.