ಬೆಂಗಳೂರು; ಕೆಎಸ್ಡಿಎಲ್‌ಗೆ ತಮನ್ನಾ ಭಾಟಿಯಾ (Tamannaah Bhatia) ರಾಯಭಾರಿ ವಿವಾದ ತೀವ್ರ ಸದ್ದು ಮಾಡಿದ್ದ ಬೆನ್ನಲ್ಲೇ, ಅರಣ್ಯ ಇಲಾಖೆಯಿಂದ ಶುಭ ಸುದ್ದಿಯೊಂದು ಬಂದಿದ್ದು, ಖ್ಯಾತ ಮಾಜಿ ಕ್ರಿಕೆಟಿಗೆ ಅನಿಲ್ ಕುಂಬ್ಳೆ (Anil Kumble) ಅವರನ್ನು ರಾಯಭಾರಿಯಾಗಿ ನೇಮಿಸಲಾಗಿದೆ.
ಈ ವಿಷಯವನ್ನು ಸಚಿವ ಈಶ್ವರ್ ಬಿ ಖಂಡ್ರೆ (Ishwar B Khandre) ಖಚಿತ ಪಡಿಸಿದ್ದು, ಅರಣ್ಯ ಮತ್ತು ಪರಿಸರ ಸಂರಕ್ಷಣೆಯ ಹಿತಾಸಕ್ತಿಯಿಂದ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ, ಖ್ಯಾತ ಕ್ರಿಕೆಟಿಗ ಮತ್ತು ಮಾಜಿ ಭಾರತ ತಂಡದ ನಾಯಕರಾದ ಅನಿಲ್ ಕುಂಬ್ಳೆ (Anil Kumble) ಅವರನ್ನು ಕರ್ನಾಟಕ ರಾಜ್ಯ ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯಾಗಿ ನಾಮನಿರ್ದೇಶಿಸಲು ನಿರ್ಧರಿಸಿದ್ದೇವೆ.
ಕುಂಬ್ಳೆ ಅವರು ಇತ್ತೀಚೆಗೆ ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ವನ್ಯಜೀವಿಗಳ ಮೇಲಿನ ಅಪಾರ ಕಾಳಜಿ, ಅರಣ್ಯದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅವರು ಹೊಂದಿರುವ ಖ್ಯಾತಿಯಿಂದಾಗಿ ಅವರು ಈ ಜವಾಬ್ದಾರಿಗೆ ಅತ್ಯಂತ ಸೂಕ್ತ ವ್ಯಕ್ತಿಯಾಗಿದ್ದಾರೆ.
ಅವರು ಯಾವುದೇ ಸಂಭಾವನೆ ಪಡೆಯದೇ, ಸಂಪೂರ್ಣವಾಗಿ ಸಮಾಜಮುಖಿ ಉದ್ದೇಶದಿಂದ ಈ ಸೇವೆಗಾಗಿ ಸಮ್ಮತಿಸಿರುವುದು ಹೆಮ್ಮೆಯ ವಿಷಯವಾಗಿದೆ.
ಈ ನಿರ್ಧಾರದಿಂದ ನಮ್ಮ ರಾಜ್ಯದ ಅರಣ್ಯ ಸಂರಕ್ಷಣೆ, ವನ್ಯಜೀವಿ ರಕ್ಷಣೆ ಮತ್ತು ಪರಿಸರ ಜಾಗೃತಿಗೆ ಹೊಸ ದಿಕ್ಕು ಮತ್ತು ಚೈತನ್ಯ ದೊರೆಯಲಿದೆ ಎಂಬ ಭರವಸೆ ನನಗಿದೆ ಎಂದಿದ್ದಾರೆ.