ಗೋಕರ್ಣ: ಗಂಗಾವಳಿ ನದಿಯ ಸೇತುವೆಯ ಕಟ್ಟೆ ಮೇಲೆ ಪುಟ್ಟ ಮಗುವನ್ನು ಅಪಾಯಕಾರಿ ಸ್ಥಿತಿಯಲ್ಲಿ ನಿಲ್ಲಿಸಿದ್ದ ಪ್ರವಾಸಿ ದಂಪತಿಯ ನಿರ್ಲಕ್ಷ್ಯವನ್ನು ಇಲ್ಲಿನ ಪೊಲೀಸರು ಸಿಸಿ ಕ್ಯಾಮೆರಾ ಮೂಲಕ ಗಮನಿಸಿ, CCTV ಕ್ಯಾಮೆರಾದ ಮೂಲಕವೇ ಸೈರನ್ ಮೊಳಗಿಸಿ ಎಚ್ಚರಿಸಿದ ಘಟನೆ ಭಾನುವಾರ ನಡೆದಿದೆ.
ವಾಹನ ಸಂಚಾರಕ್ಕೆ ಮುಕ್ತಗೊಂಡ ಈ ಸೇತುವೆಯ ಮೇಲೆ ಗೋಕರ್ಣದಿಂದ ಅಂಕೋಲಾಕ್ಕೆ ದಂಪತಿ ಕಾರಿನಲ್ಲಿ ತೆರಳುತ್ತಿದ್ದರು. ಸೇತುವೆಯ ಬಳಿ ವಾಹನ ನಿಲ್ಲಿಸಿ, ಸೆಲ್ಫಿ ತೆಗೆಯಲು ಸೇತುವೆ ಕಟ್ಟೆ ಬಳಿ ತೆರಳಿದ್ದರು.
ಕೈಯಲ್ಲಿರುವ ಪುಟ್ಟ ಮಗುವನ್ನು ಸೇತುವೆಯ ಕಟ್ಟೆ ಮೇಲೆ ನಿಲ್ಲಿಸಿದ್ದರು. ಸ್ವಲ್ಪ ಏಮಾರಿದರೂ ಮಗು ನದಿ ಪಾಲಾಗುವ ಅಪಾಯವಿತ್ತು.
ಠಾಣೆಯಲ್ಲಿ ಈ ದೃಶ್ಯವನ್ನು ಗಮನಿಸಿದ ಪೊಲೀಸರು, ಮಗುವನ್ನು ರಕ್ಷಿಸಿಕೊಳ್ಳುವಂತೆ ಅನೌನ್ಸ್ ಮಾಡಿದರು.
ದಂಪತಿ, ತಕ್ಷಣ ಪುಟ್ಟ ಕಂದಮ್ಮನನ್ನು ತಬ್ಬಿಕೊಂಡು ಬದಿಯಲ್ಲಿ ತೆರಳಿದರು. ಈ ವಿಡಿಯೋ ವೈರಲ್ ಆಗಿದ್ದು, ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಗಂಗಾವಳಿ ಸೇತುವೆ ಗೋಕರ್ಣದಿಂದ ಸುಮಾರು 5 ಕಿ.ಮೀ. ದೂರದಲ್ಲಿದೆ.