ದೊಡ್ಡಬಳ್ಳಾಪುರ: ಐ.ಪಿ.ಎಲ್ ಹದಿನೆಂಟನೇ ಆವೃತ್ತಿಯನ್ನು ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಎಲ್ಲೆಡೆ ಬರಪೂರ ಶುಭಾಶಯಗಳು ವ್ಯಕ್ತವಾಗುತ್ತಿದೆ.
ಈಗಷ್ಟೇ HAL ಏರ್ಪೋರ್ಟ್ಗೆ ಬಂದ RCB ತಂಡವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ವಾಗತ ಕೋರಿದ್ದು, ಬಸ್ಸಿನ ಮೂಲಕ ಖಾಸಗಿ ಹೋಟೆಲ್ ಗೆ ಕರೆತರಲಾಗುತ್ತಿದೆ.
ಬಳಿಕ ಸಂಜೆ ವಿಧಾನಸೌಧದ ಬಳಿ ರಾಜ್ಯ ಸರ್ಕಾರದಿಂದ RCB ತಂಡಕ್ಕೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ.
ಇಂದು ತೆರೆದ ಬಸ್ಸಿನಲ್ಲಿ ವಿಜಯೋತ್ಸವ ಯಾತ್ರೆ ನಡೆಸಲು RCB ಮ್ಯಾನೇಜ್ಮೆಂಟ್ ತೀರ್ಮಾನಿಸಿತ್ತಾದರೂ, ಅಭಿಮಾನಿಗಳು ಲಗ್ಗೆ ಇಟ್ಟು ಅವಾಂತರ ಸೃಷ್ಟಿಯಾಗುವ ಆತಂಕ ಇರುವ ಕಾರಣ ಪೊಲೀಸರು ಅನುಮತಿ ನೀಡಿಲ್ಲ.
ಇದೆಲ್ಲದರ ನಡುವೆ RCB ಗೆಲುವಿಗೆ ದೊಡ್ಡಬಳ್ಳಾಪುರದಲ್ಲಿ ಮಗುವಿಗೆ RCB ಜೆರ್ಸಿ ತೊಡಿಸಿರುವ ಪೋಷಕರು ಫೋಟೋ ಶೂಟ್ ಮಾಡಿಸಿ, ಸಂಭ್ರಮಿಸಿದ್ದಾರೆ.

ಹೌದು ದರ್ಗಾಜೋಹಳ್ಳಿ ನಿವಾಸಿಗಳಾದ ಚಂದ್ರು ಮಂಚನಬೆಲೆ – ಕಾವ್ಯ ಶ್ರೀ ದಂಪತಿಗಳು ತಮ್ಮ 7 ತಿಂಗಳ ಗಂಡು ಮಗುವಿಗೆ RCB IPL ಕಪ್ ಗೆದ್ದ ಸಂಭ್ರಮದಲ್ಲಿ ಜೆರ್ಸಿ, ಬ್ಯಾಟ್, ಬಾಲ್, ಬಿಸ್ಕೆಟ್ ಬಳಸಿ, ಅವರೇ ಕಾಳಿನಲ್ಲಿ 18, RCB ಈ ಸಲ ಕಪ್ ನಮ್ಮದೇ ಎಂದು ಬರೆದು, ಫೋಟೋ ಶೂಟ್ ಮಾಡಿಸಿ ಸಂಭ್ರಮಿಸಿದ್ದಾರೆ.