Harithalekhani: ಹಳ್ಳಿಯೊಂದರಲ್ಲಿ ನಾಲ್ವರು ಸ್ನೇಹಿತರಿದ್ದರು (Friends). ಒಬ್ಬರನ್ನು ಬಿಟ್ಟು ಮತ್ತೊಬ್ಬರಿರುತ್ತಿರಲಿಲ್ಲ. ಈ ನಾಲ್ವರ ಪೈಕಿ ಮೂವರು ತುಂಬಾ ಬುದ್ಧಿವಂತರು. ನಾನಾ ವಿದ್ಯೆಗಳಲ್ಲಿ ನಿಪುಣರು. ಆದರೆ ಅವರಲ್ಲಿ ಸಾಮಾನ್ಯ ಜ್ಞಾನ, ವಿವೇಕ ಇರಲಿಲ್ಲ.
ಮತ್ತೊಬ್ಬ ಸ್ನೇಹಿತ ಅವರಂತಿರಲಿಲ್ಲ. ಅವನ ಹೆಸರು ಸುಬುದ್ದಿ. ಹೆಸರು ಸುಬುದ್ಧಿಯಾದರೂ ಆತನಿಗೆ ಸರಸ್ವತಿ ಮಾತ್ರ ಒಲಿದಿರಲಿಲ್ಲ. ಆದರೆ ಅವನಿಗೆ ಸಾಮಾನ್ಯ ತಿಳಿವಳಿಕೆ, ಲೋಕಜ್ಞಾನ ಉಳಿದವರಿಗಿಂತ ಚೆನ್ನಾಗಿತ್ತು.
ಸ್ನೇಹಿತರ ವಿದ್ಯಾಭ್ಯಾಸ ಮುಗಿಯಿತು. ಮುಂದೆ ಮಾಡುವುದೇನು? ಸುಮ್ಮನಿದ್ದರೆ ಕಲಿತ ವಿದ್ಯೆಗೆ ಬೆಲೆ ಇರುವುದಿಲ್ಲ. ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಬೇಕಾದರೆ ಹಣ ಸಂಪಾದಿಸಬೇಕು; ಕೆಲಸ ಮಾಡದೇ ಹಣ ದಕ್ಕುವುದಿಲ್ಲ; ಇಲ್ಲೇ ಕೂತರೆ ಕೆಲಸ ಸಿಗುವುದಿಲ್ಲ-ಎಂದು ತಿಳಿದ ‘ವಿದ್ಯಾವಂತ’ರೆನ್ನಿಸಿಕೊಂಡ ಗೆಳೆಯರು, ಹಳ್ಳಿಯಿಂದ ಪಟ್ಟಣಕ್ಕೆ ತೆರಳಲು ನಿರ್ಧರಿಸಿದರು.
ಹಾಗಾದರೆ ವಿದ್ಯೆ ಒಲಿಯದ ಸ್ನೇಹಿತನನ್ನು ಏನು ಮಾಡುವುದು? ಆತ ತಮ್ಮಷ್ಟು ಬುದ್ದಿವಂತನಲ್ಲ. ಪುಸ್ತಕದ ತಿಳಿವಳಿಕೆಯೂ ಇಲ್ಲ. ಹಾಗಂತ ಅವನನ್ನು ಹಳ್ಳಿಯಲ್ಲಿ ಬಿಟ್ಟು ಹೋಗುವಂತೆಯೂ ಇಲ್ಲ. ಸರಿ ಏನಾದರಾಗಲಿ ಅವನನ್ನೂ ತಮ್ಮೊಟ್ಟಿಗೆ ಕರೆದುಕೊಂಡು ಹೋಗುವ ತೀರ್ಮಾನಕ್ಕೆ ಬಂದರು ಆ ಗೆಳೆಯರು.
ಗೆಳೆಯರೆಲ್ಲ ಒಟ್ಟಾಗಿ ಸಾಗಿದರು. ಒಂದು ದಟ್ಟವಾದ ಅರಣ್ಯ ಎದುರಾಯಿತು. ಅರಣ್ಯದೊಳಗೆ ಅವರಿಗೆ ಮೂಳೆಯ ರಾಶಿಯೊಂದು ಕಾಣಿಸಿತು. ‘ಅರೇ! ಇದೇನಿದು, ಬರೀ ಮೂಳೆಯ ರಾಶಿಯಿದೆಯಲ್ಲಾ!’ ಎಂದು ಅಚ್ಚರಿಪಟ್ಟರು.
ನಾವು ಕಲಿತಿರುವೆ ವಿದ್ಯೆ ಸಾರ್ಥಕವಾಗಬೇಕಾದರೆ ಬಿದ್ದಿರುವ ಮೂಳೆಗಳನ್ನೆಲ್ಲಾ ಸಂಗ್ರಹಿಸಿ ಅದು ಯಾವ ಪ್ರಾಣಿಯದೆಂದು ಪತ್ತೆಮಾಡಬೇಕು. ಆವಾಗಲೇ ನಾವು ಕಲಿತಿದ್ದಕ್ಕೂ ಸಾರ್ಥಕ ಎಂದು ಚರ್ಚಿಸಿ ಮೂಳೆಯ ಸಂಗ್ರಹಕ್ಕೆ ಮುಂದಾದರು.
‘ನಾನು ನನ್ನಲ್ಲಿರುವ ಬುದ್ಧಿಶಕ್ತಿಯನ್ನು ಉಪಯೋಗಿಸಿ ಇದರ ಅಸ್ಥಿಪಂಜರವನ್ನು ಜೋಡಿಸುತ್ತೇನೆ’ ಎಂದ ಮೊದಲನೇ ಸ್ನೇಹಿತ. ಆತ ಮಂತ್ರ ಹೇಳುತ್ತ ಮೂಳೆಗಳನ್ನೆಲ್ಲಾ ಒಟ್ಟುಗೂಡಿಸಿ ಅದಕ್ಕೆ ಅಸ್ಥಿಪಂಜರದ ರೂಪಕೊಟ್ಟ.
ಮತ್ತೊಬ್ಬ ಸ್ನೇಹಿತನೂ ಮಂತ್ರ ಹೇಳುತ್ತ, ಆ ಅಸ್ತಿಪಂಜರವನ್ನು ಸ್ಪರ್ಶಿಸಿದಾಗ ಅದಕ್ಕೆ ರಕ್ತ, ಮಾಂಸಗಳು ಸೇರಿಕೊಂಡು ರೂಪ ಬರತೊಡಗಿತು. ನೋಡು-ನೋಡುತ್ತಗಲೇ ಅದು ಜೀವವಿರದ ಸಿಂಹದಂತೆ ಕಂಡುಬಂದಿತು.
ಈಗ ಮೂರನೇ ಸ್ನೇಹಿತನ ಸರದಿ. ‘ನೋಡುತ್ತೀರಿ, ಅದಕ್ಕೆ ಹೇಗೆ ಜೀವ ಬರುವಂತೆ ಮಾಡುತ್ತೀನಿ’ ಎಂದು ಮಂತ್ರ ಹೇಳಲು ಆತ ಮುಂದಾದಾಗ, ಅಲ್ಲೇ ಇದ್ದ ನಾಲ್ಕನೇ ಸ್ನೇಹಿತ ‘ಏ ಬೇಡ ಕಣೋ, ಇದು ಸಿಂಹದಂತೆ ಕಾಣುತ್ತಿದೆ. ಇದಕ್ಕೇನಾದರೂ ಜೀವ ಬಂದರೆ, ನಾವ್ಯಾರೂ ಉಳಿಯುವುದಿಲ್ಲ. ಇದನ್ನು ಇಲ್ಲಿಗೇ ಬಿಟ್ಟುಬಿಡಿ’ ಎಂದ. ಇದನ್ನು ಕೇಳಲು ತಯಾರಿಸಲಿಲ್ಲ ಆ ಸ್ನೇಹಿತ ‘ಏ ಸುಮ್ಮನಿರೋ ಪೆದ್ದ. ನಿನಗೇನು ಗೊತ್ತು, ನಿನಗೇನಾದರೂ ವಿಜ್ಞಾನ ಗೊತ್ತಿದೆಯಾ?’ ಎಂದು ಜೋರು ಮಾಡಿ ಸುಮ್ಮನಾಗಿಸಿದ.
‘ಸರಿ ನಿಮ್ಮಿಷ್ಟ’ ಎನ್ನುತ್ತಾ ನಾಲ್ಕನೆಯವನು ಸುಮ್ಮನಾದ. ಅದರೆ, ಮೂರನೆಯವನು ಮಂತ್ರ ಉಚ್ಚರಿಸುವ ಮೊದಲೇ ಪಕ್ಕದಲ್ಲಿ ಇದ್ದ ಮರವೇರಿ ಸುರಕ್ಷಿತವಾಗಿ ಕುಳಿತುಕೊಂಡುಬಿಟ್ಟ. ಇದನ್ನು ಕಾಣುತ್ತಲೇ ಗಹಗಹಿಸಿ ನಗುತ್ತಾ ಆತನನ್ನು ಉಳಿದ ಮೂವರೂ ಅಪಹಾಸ್ಯ ಮಾಡಿದರು.
ಮೂರನೆಯವನು ಪಟಪಟನೆ ಮಂತ್ರ ಹೇಳುತ್ತಲೇ ಸಿಂಹಕ್ಕೆ ಜೀವ ಬಂತು. ತಕ್ಷಣ ಸಿಂಹವು ಆ ಮೂವರ ಮೇಲೂ ಆಕ್ರಮಣ ಮಾಡಿತು. ಅವರೆಲ್ಲ ಸಿಂಹಕ್ಕೆ ಬಲಿಯಾದರು.
ಈ ಎಲ್ಲವನ್ನೂ ಮರದ ಮೇಲಿಂದ ವೀಕ್ಷಿಸುತ್ತಿದ್ದ ಸುಬದ್ದಿಗೆ ದುಃಖವಾಯಿತು. ಎಷ್ಟು ಹೇಳಿದರೂ ಅನ್ಯಾಯವಾಗಿ ತನ್ನ ಸ್ನೇಹಿತರು ಪ್ರಾಣ ಕಳೆದುಕೊಂಡರಲ್ಲಾ ಎಂದು ಮರುಕಪಟ್ಟ.
ಸಿಂಹ ಹೊರಟುಹೋದ ಸ್ವಲ್ಪ ಹೊತ್ತಿನ ನಂತರ ಮರದ ಮೇಲಿಂದ ಇಳಿದು ತನ್ನ ಹಳ್ಳಿಗೆ ಹಿಂತಿರುಗಿದ.
ಕೃಪೆ: ಕೆ.ಮುರಳಿ, ಮಕ್ಕಳಿಗಾಗಿ ನೂರಾರು ಕಥೆಗಳು, ಕೃಷಿವಿಕಾಸ್ ಪಬ್ಲಿಕೇಷನ್ಸ್, ಬೆಂಗಳೂರು.