ದೊಡ್ಡಬಳ್ಳಾಪುರ: ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲಿ ಕಳೆದ ಒಂದು ತಿಂಗಳಿನಿಂದ ಉತ್ತಮವಾಗಿ ಮಳೆಯಾಗುತ್ತಿದ್ದು, ಶೇ.95 ರಷ್ಟು ಬಿತ್ತನೆ ಕಾರ್ಯವೂ ಸಹ ಮುಕ್ತಾಯಗೊಂಡಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಪಿ. ರಾಘವೇಂದ್ರ (P. Raghavendra) ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಬೆಳೆಯುವ ಬೆಳೆಯೆಂದರೆ ಪ್ರಮುಖವಾಗಿ ರಾಗಿಯಾಗಿದ್ದು, ಕುಂಟೆಯೊಡಯುವ ಹಂತದಿಂದ ತೆಂಡೆ ಹೊಡೆಯುವ ಹಂತದವರೆಗಿನ ಬೆಳೆಯನ್ನು ಕಾಣಬಹುದಾಗಿದೆ.
ರೈತರು ಕಳೆ ತೆಗೆದ ನಂತರ ತೆಂಡೆ ಹೊಡೆಯುವ ಹಂತದಲ್ಲಿ ಶೇ. 50 % ಹರಳು ರೂಪದ ಯೂರಿಯಾವನ್ನು ಮೇಲುಗೊಬ್ಬರವಾಗಿ ಬಳಸುತ್ತಿರುವುದು ವೈಜ್ಞಾನಿಕ ಶಿಫಾರಸ್ಸಾಗಿರುತ್ತದೆ.
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ರವರ ಶಿಫಾರಸ್ಸಿನ ಪ್ರಕಾರ (20:15:16) ಒಂದು ಎಕೆರೆ ಖುಷ್ಕಿ ರಾಗಿ ಬೆಳೆಗೆ 20 ಕೆ.ಜಿ. ಯಷ್ಟು ಸಾರಜನಕ ಬೇಕಾಗಿದ್ದು, ಶೇ 50 ರಷ್ಟು ಮೂಲಗೊಬ್ಬರವಾಗಿ 10 ಕೆ.ಜಿ ಬಿತ್ತನೆ ಸಮಯದಲ್ಲಿ ಉಳಿದ 10 ಕೆ.ಜಿ ಸಾರಜನಕ ಬಿತ್ತನೆ ಮಾಡಿದ 6-7 ವಾರಗಳ ನಂತರ ಮೇಲುಗೊಬ್ಬರವಾಗಿ ಕೊಡುವುದು. ಒಂದು ಯೂರಿಯಾ (45 ಕೆ.ಜಿ) ಚೀಲದಲ್ಲಿ ಶೇ.46 ರಷ್ಟು ಅಂದರೆ 20.7 ಕೆ.ಜಿಯಷ್ಟು ಸಾರಜನಕವಿದ್ದು, ಮೂಲಗೊಬ್ಬರಕ್ಕೆ 10 ಕೆ.ಜಿ ಸಾರಜನಕವನ್ನು ಒದಗಿಸುತ್ತದೆ. ಉಳಿದ 10 ಕೆ.ಜಿ ಯ ಸಾರಜನಕವನ್ನು ನೀಗಿಸಲೂ ಸಹ ಈ ಒಂದು ಚೀಲ ಯೂರಿಯಾ ಸಾಕಾಗುತ್ತದೆ.
ಮುಂದುವರೆದು ಒಂದು ಎಕೆರೆಗೆ ಒಂದು ಯೂರಿಯಾ ಚೀಲದಂತೆ ರೈತರು ಶಿಫಾರಸ್ಸು ಪ್ರಮಾಣಕ್ಕಿಂತ ಮಿತಿಮೀರಿ ಹರಳು ರೂಪದ ಯೂರಿಯಾ ಬಳಸುತ್ತಿದ್ದು, ಬೆಳೆಯ ಅವಶ್ಯಕಿಂತ ಹೆಚ್ಚಿಗೆ ಬಳಸಿದ ಯೂರಿಯ ಅಂಶವು ಮಣ್ಣಿನ ಆರೋಗ್ಯವನ್ನು ಹದಗೆಡುವುದಲ್ಲದೇ ಕುತ್ತಿಗೆ ಬೆಂಕಿ ರೋಗ, ಕೀಟಭಾದೆ ಮತ್ತು ಅಸಮತೋಲನ ಬೆಳವಣಿಗೆಯಿಂದ ಕಟಾವಿನ ಸಮಯದಲ್ಲಿ ನೆಲಕ್ಕುರುಳಿ ತೆನೆ ಮತ್ತು ಹುಲ್ಲು ನಷ್ಟವಾಗುತ್ತದೆ. ಅತಿಯಾದ ಯೂರಿಯಾ ಬಳಸುವುದರ ಮೂಲಕ ಬೆಳೆಗಳಲ್ಲಿ ನೈಟ್ರೇಟ್ ಅಂಶದಲ್ಲಿನ ಬದಲಾವಣೆಗಳಿಂದ ಆಹಾರ ಪಧಾರ್ಥಗಳಲ್ಲಿ ನೈಟ್ರೇಟ್ ಪ್ರಮಾಣ ಅಧಿಕವಾಗಿ ಕಾನ್ಸರ್ ರೋಗಕ್ಕೂ ಕಾರಣಾವಾಗಬಹುದಾಗಿದೆ.
ನದಿ-ಕೆರೆ ಜಲಮೂಲಗಳಿಗೆ ನೈಟ್ರೇಟ್ ಅಂಶಗಳು ಸೇರಿ ಕುಡಿಯುವ ನೀರಿನ ಗುಣಮಟ್ಟದಲ್ಲಿ ಏರುಪೇರಾಗಿ ಮಾನವನ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ.
ಈ ಅಪಾಯವನ್ನು ತಡೆಗಟ್ಟಲು ರಾಗಿ ಬೆಳೆಗೆ ಅವಶ್ಯಕತೆಯಿರುವಷ್ಟು ಅಂದರೆ ಪೋಟಾಷ್ ಅಂಶವುಳ್ಳ ಸಂಯುಕ್ತ ಗೊಬ್ಬರಗಳಾದ 15:15:15, 19:19:19 ನಂತಹ ಗೊಬ್ಬರಗಳನ್ನು ರೈತರೂ ಬಳಸಬಹುದಾಗಿದೆ.
ಇದರಿಂದ ಉತ್ತಮವಾದ ಬೆಳೆ ಬೆಳೆಯುವುದರೊಂದಿಗೆ ಮಣ್ಣಿನ ಹಾಗೂ ಜನರ ಆರೋಗ್ಯವನ್ನು ಕಾಪಾಡಬಹುದಾಗಿದೆ. ಹರಳು ರೂಪದ ಪರ್ಯಾಯವಾಗಿ ನಾನ್ಯೊ ಯೂರಿಯಾ ಬಳಕೆಯಿಂದ ಉತ್ಪಾದನೆ ಹೆಚ್ಚಾಗುವುದರೊಂದಿಗೆ ಬೆಳೆ ಬೆಳೆಯುವ ಖರ್ಚೂ ಸಹ ಕಡಿಮೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.
ನಾನ್ಯೋ ಯೂರಿಯಾ ಅಂದರೇನು?;
ನಾನ್ಯೋ ಯೂರಿಯಾ ಒಂದು ದ್ರವ ರೂಪದ ರಸಗೊಬ್ಬರವಾಗಿದೆ.ಇದು ಸಾಂಪ್ರದಾಯಕ ಹರಳು ರೂಪದ ಯೂರಿಯಾ ಗೊಬ್ಬರಕ್ಕಿಂತ 8-10 ಪಟ್ಟು ಪರಿಣಾಮಕಾರಿಯಾಗಿದ್ದು, ಬೆಳೆಗಳಿಗೆ ತ್ವರಿತ ಪೋಷಕಾಂಶಗಳನ್ನು ನೀಡುತ್ತದೆ.
ನಾನ್ಯೋ ಯೂರಿಯಾದಿಂದಾಗುವ ಅನುಕೂಲಗಳು
ರಾಸಾಯನಿಕ ಬಳಕೆ ಕಡಿಮೆಯಾಗುತ್ತದೆ.
ನಾನ್ಯೋ ಯೂರಿಯಾ ಪರಿಣಾಮಕಾರಿಯಾಗಿದ್ದು, ಉತ್ಪಾದನೆ ಹೆಚ್ಚಳ.
ಮಣ್ಣಿನ ಆರೋಗ್ಯ ಸುಧಾರಣೆ ಆಗುತ್ತದೆ.
ರಸಗೊಬ್ಬರದ ಖರ್ಚು ಕಡಿಮೆ ಆಗುತ್ತದೆ.