ದೊಡ್ಡಬಳ್ಳಾಪುರ: 2025-26 ನೇ ಸಾಲಿನ CBSE ರಾಷ್ಟ್ರ ಮಟ್ಟದ ಟೈಕ್ವಾಂಡೋ ಕ್ರೀಡಾಕೂಟದಲ್ಲಿ ತಾಲೂಕಿನ ಪ್ರತಿಷ್ಠಿತ ಶಾಲೆಯಾದ ಎಂಎಸ್‌ವಿ ಪಬ್ಲಿಕ್ ಶಾಲೆಯ (MSV Public School) ವಿದ್ಯಾರ್ಥಿನಿ ಹರ್ಷಿತಾ ಎಂ ಭಾಗವಹಿಸಿ ಬೆಳ್ಳಿಯ ಪದಕವನ್ನು ಪಡೆದಿದ್ದಾರೆ.
ಉತ್ತರ ಪ್ರದೇಶದ ಇಟಾವಾ ನಗರದ ಆಮ್ನೀ ವಿಷನ್ ಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಹರ್ಷಿತಾ ಎಂ. ತೀವ್ರವಾದ ಪೈಪೋಟಿಯ ನಡುವೆಯೂ ಗೆಲುವಿನ ಮೂಲಕ ತನ್ನ ಛಾಪನ್ನು ಮೂಡಿಸಿದ್ದಾಳೆ.

17 ವರ್ಷದೊಳಗಿನ ವಿದ್ಯಾರ್ಥಿಗಳ 32-35 KG ವಿಭಾಗದಲ್ಲಿ ಪಾಲ್ಗೊಂಡಿದ್ದ ಹರ್ಷಿತಾ ಎಂ. ಪುಣೆಯಲ್ಲಿ ನಡೆದಿದ್ದ ದಕ್ಷಿಣ ವಲಯ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದರು.
ಸಂಸ್ಥೆಯ ಅಧ್ಯಕ್ಷ ಎ.ಸುಬ್ರಮಣ್ಯ ಅವರು ಅಭಿನಂದಿಸಿ ಮಾತನಾಡಿ, “ದೊಡ್ಡಬಳ್ಳಾಪುರ ತಾಲ್ಲೂಕಿನಿಂದ ಪ್ರಪ್ರಥಮವಾಗಿ CBSE ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಹರ್ಷಿತಾ ಭಾಗವಹಿಸಿ ಶಾಲೆಗೆ, ಪೋಷಕರಿಗೆ ಮತ್ತು ತರಬೇತುದಾರರಿಗೆ ಹೆಮ್ಮೆ ತರುವಂತಹ ಸಾಧನೆ ಮಾಡಿದ್ದಾರೆ” ಎಂದರು
ಪ್ರಾಂಶುಪಾಲರಾದ ರೆಮ್ಯ ಬಿ.ವಿ ಮಾತನಾಡಿ, “ದೇಶದ ವಿವಿಧ ರಾಜ್ಯಗಳಿಂದ ಬಂದಿರುವ ಘಟಾನುಘಟಿ ಸ್ಪರ್ಧಿಗಳ ನಡುವೆಯೂ ಬೆಳ್ಳಿಪದಕ ಸಾಧಿಸಿರುವ ಈ ಸಾಧನೆ ಕೇವಲ ಹರ್ಷಿತಾರ ಪರಿಶ್ರಮ ಹಾಗೂ ದೃಢ ಸಂಕಲ್ಪದ ಫಲಿತಾಂಶ. ಈಕೆ ಇನ್ನೂ ಮಹತ್ತರ ಸಾಧನೆ ಸಾಧಿಸಲಿ” ಎಂದರು.
ರಾಷ್ಟ್ರ ಮಟ್ಟದ ಟೇಕ್ವಾಂಡೋ ಕ್ರೀಡಾಕೂಟವನ್ನು ಸೆಪ್ಟೆಂಬರ್ 03 ರಿಂದ ಸೆಪ್ಟೆಂಬರ್ 07 ವರೆಗೆ ಆಯೋಜಿಸಲಾಗಿತ್ತು.
ಟೇಕ್ವಾಂಡೋ ತರಬೇತುದಾರರಾದ ಪರಮೇಶ್ವರ್ ನೇತೃತ್ವದಲ್ಲಿ ಟೇಕ್ವಾಂಡೋ ತಂಡ ಈ ಕ್ರೀಡಾಕೂಟದಲ್ಲಿ ಭಾಗವಹಿಸಿತ್ತು.