ಹಾವೇರಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Narendra Modi) ಎಲ್ಲ ರಂಗದಲ್ಲಿ ಕೆಲಸ ಮಾಡಿರುವುದರಿಂದ ಸಶಕ್ತ ಭಾರತ ಅಗಿದೆ. ಅವರ ಕೈ ಬಲ ಪಡಿಸಬೇಕು. ಪ್ರಧಾನಿಯಾಗಿ ಅವರು ಒಂದು ದಶಕ ಪೂರೈಸಿದ್ದಾರೆ. ಇನ್ನೊಂದು ದಶಕ ಪೂರೈಸಿದರೆ ಭಾರತ ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಅಭಿಪ್ರಾಯ ಪಟ್ಟಿದ್ದಾರೆ.
ಹಾವೇರಿ ಜಿಲ್ಲೆಯ ಗುತ್ತಲ ಪಟ್ಟಣದ ಶ್ರೀ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಕ್ಷ ಹಾವೇರಿ ಗ್ರಾಮೀಣ ಮಂಡಳದ ವತಿಯಿಂದ ಸೇವಾ ಪಾಕ್ಷಿಕದ ಅಂಗವಾಗಿ ಏರ್ಪಡಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೀವನ ಆಧಾರಿತ ಪೋಟೋ ಹಾಗೂ ಬ್ಯಾನರಗಳ ಪ್ರದರ್ಶನವನ್ನು ಉದ್ಘಾಟಿಸಿ, ವೀಕ್ಷಿಸಿ ಮಾತನಾಡಿದರು. ಪ್ರಧಾನ ಮಂತ್ರಿ ಅಪರೂಪಕ್ಕೆ ಒಬ್ಬ ದೇಶಭಕ್ತ ಸಿಕ್ಕಿದ್ದಾರೆ.
ಒಬ್ಬ ದಿಟ್ಟ ನಿಲುವಿನ ನಾಯಕ ದೇಶವನ್ನು ಬಲಿಷ್ಠವಾಗಿ ಕಟ್ಟುವ ಸಂಕಲ್ಪ ಮಾಡಿದ್ದಾರೆ. ಅದಕ್ಕಾಗಿ ಇಚ್ಚಾಶಕ್ತಿಯಿಂದ ಅದಕ್ಕೆ ಬೇಕಾದ ಕಾರ್ಯಕ್ರಮ ಹಾಕಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಭಾರತ ಪ್ರಪಂಚದಲ್ಲಿ ಬಲಿಷ್ಠ ಆಗಿದ್ದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಕಾರಣ ಆಗಿದೆ ಎಂದು ಹೇಳಿದರು.
ಚಾರಿತ್ರ್ಯವಂತ ವ್ಯಕ್ತಿತ್ವ
ಮೋದಿಯವರು ಬಾಲ್ಯದಿಂದ ಚಾರಿತ್ರ್ಯವಂತ ವ್ಯಕ್ತಿತ್ವ, ಆರ್ ಎಸ್ ಎಸ್ ಸ್ವಯಂ ಸೇವಕರಾಗಿ ಶಿಸ್ತು ಪಡೆದುಕೊಂಡು ಅದನ್ನು ಪ್ರಧಾನಿಯಾಗಿಯೂ ಉಳಿಸಿಕೊಂಡು ಬಂದಿದ್ದಾರೆ ಸ್ವಾಮಿ ವಿವೇಕಾನಂದರ ವಿಚಾಧಾರೆಯಿಂದ ಪ್ರಭಾವಿತರಾಗಿ ಅದರಂತೆ ನಡೆದುಕೊಂಡಿದ್ದಾರೆ.
ಮೋದಿಯವರು ಪ್ರಧಾನಿ ಆಗದಿದ್ದರೆ ಏನಾಗುತ್ತಿತ್ತು. ಮೋದಿ ಪ್ರಧಾನಿ ಆಗುವ ಮೊದಲು ಬೆಂಗಳೂರು, ಮುಂಬೈನಲ್ಲಿ ತಿಂಗಳಿಗೊಮ್ಮೆ ಬಾಂಬ್ ಬ್ಕಾಸ್ಟ್ ಆಗುತ್ತಿದ್ದವು, ಜಮ್ಮು ಕಾಶ್ಮೀರ ಭಯೋತ್ಪಾದನೆ ರಾಜ್ಯವಾಗಿತ್ತು. ಪೊಲಿಸರು ರಸ್ತೆ ಮೇಲೆ ಓಡಾಡುವಂತಿರಲಿಲ್ಲ. ಮೋದಿ ಬಂದ ಮೇಲೆ ಪಾಕಿಸ್ತಾನಿಯರು ಒಳ ನುಸುಳುವುದು ನಿಂತಿದೆ. ಇದು ಮೋದಿಯವರ ದೊಡ್ಡ ಸಾಧನೆ.
ಮೊನ್ನೆ ಪೆಹಲ್ಗಾಮ್ ದಾಳಿಯಾದ ಮೇಲೆ ನೂರಾರು ಭಯೋತ್ಪಾದಕರನ್ನು ನಾಶ ಮಾಡಿ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ಕೊಟ್ಟ ನಾಯಕ ನರೇಂದ್ರ ಮೋದಿ. ಕಾಂಗ್ರೆಸ್ ಸರ್ಕಾರ ಇದ್ದಾಗ ದೇಶದಲ್ಲಿ ಶೇ 12% ಹಣ ದುಬ್ಬರ ಇತ್ತು. ಎಲ್ಲ ವಸ್ತುಗಳ ಬೆಲೆ ಏರಿತ್ತು. ಪೆಟ್ರೊಲ್ ಡಿಸೇಲ್, ಹಾಲು ಬ್ರೆಡ್ಡು ಎಲ್ಲದರ ಬೆಲೆ ಹೆಚ್ಚಳ ಆಗಿತ್ತು. ಅದನ್ನು ನಿಯಂತ್ರಿಸಲು ಜಿಎಸ್ ಟಿ ತಂದು ಕ್ರಮ ಕೈಗೊಂಡರು.
ದೇಶದಲ್ಲಿ 25 ಕೋಟಿ ಬಡವರನ್ನು ಮೇಲೆ ಎತ್ತುವ ಕೆಲಸ ಮಾಡಿದ್ದಾರೆ. ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಮಾಡಿದ್ದಾರೆ. ಈಗಾಗಲೇ ಮೂರೂವರೆ ಲಕ್ಷ ಕೋಟಿ ಗಿಂತ ಹೆಚ್ಚು ಹಣ ರೈತರಿಗೆ ಕೊಟ್ಟಿದ್ದಾರೆ. ಕರ್ನಾಟದಲ್ಲಿ ಸುಮಾರು 64 ಲಕ್ಷ ರೈತರಿಗೆ ಹಣ ಜಮೆ ಆಗುತ್ತಿದೆ. ರೈತರಿಗೆ 5 ಲಕ್ಷದವರೆಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವ ವ್ಯವಸ್ಥೆ ಮಾಡಿದ್ದಾರೆ. ಬೆಳೆ ನಷ್ಟವಾದಾಗ ಬೆಂಬಲ ಬೆಲೆ ಕೊಡುವ ಕೆಲಸ ಮಾಡಿದ್ದಾರೆ. ಜನರ ಆರೋಗ್ಯಕ್ಕಾಗಿ ಆಯುಷ್ಮಾನ ಭಾರತ ಯೋಜನೆ ತಂದು ಪ್ರತಿಯೊಬ್ಬರೂ ಆರೋಗ್ಯವಂತಾಗರಬೆಕು ಎಂದು ಮಾಡಿದ್ದಾರೆ. ಕರ್ನಾಟಕದಲ್ಲಿ 2 ಕೋಟಿ ಜನ ಇದರ ಲಾಭ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ ನಾಲ್ಕು ಕೋಟಿ ಮನೆ ನಿರ್ಮಿಸಿದ್ದಾರೆ. ಜಲಜೀವನ್ ಮಿಷನ್ ಮೂಲಕ ಪ್ರತಿ ಮನೆಗೂ ನೀರು ಬರುವಂತೆ ಮಾಡಿದ್ದಾರೆ. ಹೆಣ್ಣು ಮಕ್ಕಳ ಅರೊಗ್ಯ ಹಾಳಾಗಬಾರದು ಎಂದು ಹಳ್ಳಿಗಳಿಗೂ ಅಡುಗೆ ಅನಿಲ ಕೊಟ್ಟಿದ್ದಾರೆ.
ಪ್ರತಿ ಮನೆಗೆ ಸೋಲಾರ್ ವಿದ್ಯುತ್ ನೀಡುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ಮನೆಗೆ ಶೌಚಾಲಯ, ಪ್ರತಿಯೊಬ್ಬರಿಗೂ ಐದು ಕೆಜಿ ಅಕ್ಕಿ 80 ಕೋಟಿ ಜನರಿಗೆ ಕೊಡುತ್ತಿದ್ದಾರೆ. ಅನ್ನಭಾಗ್ಯ ಅಕ್ಕಿ ರಾಜ್ಯ ಸರ್ಕಾರದ ಅಕ್ಕಿಯಲ್ಲ ಹೆಸರು ಮಾತ್ರ ರಾಜ್ಯ ಸರ್ಕಾರದ್ದು, ಅಕ್ಕಿ ಕೇಂದ್ರ ಸರ್ಕಾರದ್ದು ಎಂದು ಹೇಳಿದರು.
ನುಡಿದಂತೆ ನಡೆದ ಮೋದಿ
ಮೊನ್ನೆ ಜಿಎಸ್ ಟಿ ಕಡಿಮೆ ಮಾಡುವ ಮುಖಾಂತರ ಗೊಬ್ಬರದ ಧಾರಣೆ ಯಂತ್ರೋಪಕರ, ಟ್ರ್ಯಾಕ್ಟರ್, ರೈತರಿಗೆ ಬೇಕಾಗುವ ಎಲ್ಲ ವಸ್ತುಗಳ ಬೆಲೆ ಕಡಿಮೆ ಆಗುತ್ತವೆ. ಗೋಧಿ, ಅಕ್ಕಿ, ಮೊಸರು, ಹಾಲು, ದಿನನಿತ್ಯ ಬಳಸುವ ವಸ್ತುಗಳ ಧಾರಣೆ ಕಡಿಮೆಯಾಗುತ್ತದೆ. ನುಡಿದಂತೆ ನಡೆದಿರುವುದು ಪ್ರಧಾನಮಂತ್ರಿ ಮೋದಿಯವರು. ಹಲವಾರು ವಸ್ತುಗಳಿಗೆ ಶೂನ್ಯ ತೆರಿಗೆ ಮಾಡಿದ್ದಾರೆ. ಇನ್ನು ಕೆಲವು ವಸ್ತುಗಳಿಗೆ ಶೇ 5% ತೆರಿಗೆ ಮಾಡಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ತೆರಿಗೆ ಸ್ಲ್ಯಾಬ್ 12, 18, 28 ಇತ್ತು. ಮೋದಿಯವರು ಬಡವರ ಪರವಾಗಿ ರೈತರು, ಹೆಣ್ಣುಮಕ್ಕಳ ಪರವಾಗಿ ಎಲ್ಲ ರಂಗದಲ್ಲಿ ಕೆಲಸ ಮಾಡಿರುವುದುರಿಂದ ಸಶಕ್ತ ಭಾರತ ಅಗಿದೆ. ಅವರ ಕೈ ಬಲ ಪಡಿಸಬೇಕು. ಅವರು ಪ್ರಧಾನಿಯಾಗಿ ಒಂದು ದಶಕ ಪೂರೈಸಿದ್ದಾರೆ. ಇನ್ನೊಂದು ದಶಕ ಪೂರೈಸಿದರೆ ಭಾರತ ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗುತ್ತದೆ. ಅದಕ್ಕೆ ಎಲ್ಲರೂ ಸಹಾಯ, ಸಹಕಾರ ಮಾಡಬೇಕು. ಪ್ರಧಾನಮಂತ್ರಿ ಮೋದಿಯವರ ಹುಟ್ಟು ಹಬ್ಬ ಅರ್ಥಪೂರ್ಣವಾಗಿ ಆಗಬೇಕು. ಅದನ್ನು ಎಲ್ಲರೂ ಸೇರಿ ಮಾಡೋಣ. ಅದೇ ನಾವು ನರೇಂದ್ರ ಮೋದಿಯವರಿಗೆ ಸಲ್ಲಿಸುವ ಗೌರವ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಹಾವೇರಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹಾಗೂ ಗುತ್ತಲ ಪಟ್ಟಣದ ಪ್ರಮುಖರು ಉಪಸ್ಥಿತರಿದ್ದರು.