ಬೆಂಗಳೂರು: ಈಶ ಗ್ರಾಮೋತ್ಸವ 2025ರ (Isha Gramotsava) ಪುರುಷರ ವಾಲಿಬಾಲ್‌ನಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದ ದೊಡ್ಡಬಳ್ಳಾಪುರ ತಾಲ್ಲೂಕಿನ ಹೆಗ್ಗಡಿಹಳ್ಳಿ ತಂಡಕ್ಕೆ ಇಂದು ಸದ್ಗುರು ಸನ್ನಿಧಿಯಲ್ಲಿ ಭರ್ಜರಿ ಸ್ವಾಗತ ಸಿಕ್ಕಿತು.
ಸ್ವಯಂಸೇವಕರು ಮತ್ತು ಸ್ಥಳೀಯರು ಆಟಗಾರರನ್ನು ಹೂಮಾಲೆ, ಸಿಹಿತಿಂಡಿಗಳು ಮತ್ತು ಸಂಭ್ರಮಾಚರಣೆಗಳೊಂದಿಗೆ ಸ್ವಾಗತಿಸಿದರು. ತಂಡದವರು, ತಮ್ಮ ಕುಟುಂಬದವರೊಂದಿಗೆ ಜೊತೆಗೂಡಿ ಸದ್ಗುರು ಸನ್ನಿಧಿಯ ನಾಗ ಮಂಟಪ, ಯೋಗೇಶ್ವರ ಲಿಂಗ ಮತ್ತು ಆದಿಯೋಗಿಯ ದರ್ಶನವನ್ನು ಪಡೆದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಹೆಗ್ಗಡಿಹಳ್ಳಿಯ ಬಿ.ರಂಜಿತ್ ನೇತೃತ್ವದ ತಂಡ ಈ ವರ್ಷ ಮೊದಲ ಬಾರಿಗೆ ಈಶ ಗ್ರಾಮೋತ್ಸವದಲ್ಲಿ ಭಾಗವಹಿಸಿತು.
6 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದಿಂದ 4,249ಕ್ಕೂ ಹೆಚ್ಚು ಪುರುಷರ ವಾಲಿಬಾಲ್ ತಂಡಗಳೊಂದಿಗೆ ಸ್ಪರ್ಧಿಸಿ, ಈ ತಂಡವು ಸೆಪ್ಟೆಂಬರ್ 21ರಂದು ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ನಡೆದ ರಾಷ್ಟ್ರ ಮಟ್ಟದ ಫೈನಲ್ಸ್ ಪಂದ್ಯಕ್ಕೆ ಮುನ್ನಡೆಯಿತು.
ಸದ್ಗುರುಗಳ ಸಾನ್ನಿಧ್ಯದಲ್ಲಿ ನಡೆದ ಫೈನಲ್ಸ್ ಪಂದ್ಯದಲ್ಲಿ, ಮುಖ್ಯ ಅತಿಥಿಗಳಾದ ಕೇಂದ್ರ ಕ್ರೀಡಾ ಸಚಿವರಾದ ಲ ಮನ್ಸುಖ್ ಮಂಡಾವಿಯಾ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಚೆಸ್ಸ್ ಗ್ರ್ಯಾಂಡ್‌ಮಾಸ್ಟರ್ ವೈಶಾಲಿ ರಮೇಶ್‌ಬಾಬು ಮತ್ತು ಪ್ಯಾರಾಲಿಂಪಿಕ್ ಪದಕ ವಿಜೇತೆ ಭಾವಿನಾ ಪಟೇಲ್ ಅವರುಗಳು ವೇದಿಕೆಯನ್ನು ಅಲಂಕರಿಸಿದ್ದರು.
ಸದ್ಗುರುಗಳ ಉಪಸ್ಥಿತಿಯಲ್ಲಿ ನಡೆದ ಗ್ರಾಂಡ್ ಫಿನಾಲೆಯಲ್ಲಿ ಸೈನಾ ನೆಹ್ವಾಲ್ ಅವರಿಂದ ಆಟಗಾರರನ್ನು ಸನ್ಮಾನಿಸಲಾಯಿತು ಮತ್ತು ಆಟಗಾರರು ₹3 ಲಕ್ಷ ನಗದು ಬಹುಮಾನವನ್ನೂ ಸ್ವೀಕರಿಸಿದರು.
ವೃತ್ತಿಪರ ಸೌಲಭ್ಯಗಳಿಂದ ದೂರವಿದ್ದರೂ, ಹೆಗ್ಗಡಿಹಳ್ಳಿಯ ಯುವ ಕ್ರೀಡಾಪಟುಗಳು ತಮ್ಮ ಪ್ರಾಮಾಣಿಕ ಪ್ರಯತ್ನ ಮತ್ತು ಉತ್ಸಾಹದಿಂದ ಮುನ್ನಡೆದು, ಗ್ರಾಮೀಣ ಭಾರತದ ಅನೇಕ ಮಹತ್ವಾಕಾಂಕ್ಷೆಯ ಕ್ರೀಡಾಪಟುಗಳಿಗೆ ಮಾದರಿಯಾಗಿದ್ದಾರೆ.
ಪ್ರಸ್ತುತ ವರ್ಷದ ಈಶ ಗ್ರಾಮೋತ್ಸವದಲ್ಲಿ ಕರ್ನಾಟಕದ 18 ಜಿಲ್ಲೆಗಳಿಂದ 7,200ಕ್ಕೂ ಹೆಚ್ಚು ಗ್ರಾಮೀಣ ಸ್ಪರ್ಧಿಗಳು ದಾಖಲೆಯ ಮಟ್ಟದಲ್ಲಿ ಭಾಗವಹಿಸಿದ್ದು, ಇದು ರಾಜ್ಯದ ಗ್ರಾಮೀಣ ಕ್ರೀಡೆಗಳ ಅತಿದೊಡ್ಡ ಆಚರಣೆಗಳಲ್ಲಿ ಒಂದಾಗಿದೆ.
ರಾಷ್ಟ್ರೀಯ ಮಟ್ಟದಲ್ಲಿ, ಈಶ ಗ್ರಾಮೋತ್ಸವ 2025ರ ಆವೃತ್ತಿಯು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ತೆಲಂಗಾಣ ಮತ್ತು ಮೊದಲ ಬಾರಿಗೆ ಒಡಿಶಾ ಸೇರಿದಂತೆ ಆರು ರಾಜ್ಯಗಳಲ್ಲಿ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯಿತು.
ಈ ಬಾರಿಯ ಉತ್ಸವವು 183 ಸ್ಥಳಗಳು, 5,472 ತಂಡಗಳು, 12,000 ಕ್ಕೂ ಹೆಚ್ಚು ಮಹಿಳೆಯರನ್ನು ಒಳಗೊಂಡಂತೆ ಒಟ್ಟು 63,220 ಸ್ಪರ್ಧಿಗಳು, ಮತ್ತು 35,000ಕ್ಕೂ ಹೆಚ್ಚು ಹಳ್ಳಿಗಳ ಪ್ರಾತಿನಿಧ್ಯಕ್ಕೆ ಸಾಕ್ಷಿಯಾಯಿತು.
2004ರಲ್ಲಿ ಸದ್ಗುರುಗಳು ಚಾಲನೆ ನೀಡಿದ ಈಶ ಗ್ರಾಮೋತ್ಸವದ ಉದ್ದೇಶವು ಗ್ರಾಮೀಣ ಜನರ ಜೀವನದಲ್ಲಿ ಕ್ರೀಡೆ ಮತ್ತು ಆಟದ ಚೈತನ್ಯವನ್ನು ತರುವುದಾಗಿದೆ.
ವಿಶಿಷ್ಟ ಸ್ವರೂಪದಲ್ಲಿ, ಈಶ ಗ್ರಾಮೋತ್ಸವವು ವೃತ್ತಿಪರ ಆಟಗಾರರಿಗಲ್ಲದೆ, ದಿನಗೂಲಿ ಕಾರ್ಮಿಕರು, ಮೀನುಗಾರರು ಮತ್ತು ಗೃಹಿಣಿಯರಂತಹ ಗ್ರಾಮೀಣ ಜನಸಾಮಾನ್ಯರಿಗೆ ತಮ್ಮ ದೈನಂದಿನ ಜೀವನದಿಂದ ಬಿಡುವು ಪಡೆದು ಕ್ರೀಡೆಯ ಸಂಭ್ರಮ ಮತ್ತು ಐಕ್ಯತೆಯ ಶಕ್ತಿಯನ್ನು ಆನಂದಿಸಲು ವೇದಿಕೆ ಮಾಡಿಕೊಟ್ಟಿದೆ.