ದೊಡ್ಡಬಳ್ಳಾಪುರ: ತಾಲೂಕಿನಾಧ್ಯಂತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ (Rain) ರಾಗಿ ಬೆಳೆ (Millet crop) ನೆಲಕಚ್ಚಿದ್ದು, ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.

ರಾಗಿ, ಜೋಳ ಮತ್ತಿತರ ಬೆಳೆಗಳಿಗೆ ಮಳೆ ಕೊರತೆ ಅನುಭಮಿಸುತ್ತಿದ್ದ ರೈತರ ಪಾಲಿಗೆ ಇದೀಗ ಸುರಿಯುತ್ತಿರುವ ಮಳೆಯು ಕಾರ್ಮೋಡ ಕವಿದಂತೆ ಮಾಡಿದೆ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ 54,730 ಎಕರೆ ಜಮೀನಿನಲ್ಲಿ ರಾಗಿ ಬಿತ್ತನೆ ಮಾಡಲಾಗಿದ್ದು, ರಾಜ್ಯ ಸರ್ಕಾರ ರಾಗಿ ಖರೀದಿಗೆ ಬೆಂಬಲ ಹೆಚ್ಚಿಸಿರುವ ಕಾರಣ ಕಳೆದ ವರ್ಷಕ್ಕಿಂತ ಹಚ್ಚಿನ ಬಿತ್ತನೆ ಮಾಡಲಾಗಿದೆ.
ಈಗ ಸುರಿಯುತ್ತಿರುವ ಮಳೆಯಿಂದಾಗಿ ರಾಗಿ ಬೆಳೆ ಮಕಾಡೆ ಮಲಗಿದ್ದು, ಸಾಲ ಮಾಡಿ ರಾಗಿ ಬಿತ್ತನೆ ಮಾಡಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರಸ್ತುತ ಕಾಳು ಕಟ್ಟುತ್ತಿರುವ ರಾಗಿ ಬೆಳೆ ತೂಕ ಹಾಗೂ ತೇವಾಂಶ ಹೆಚ್ಚಾಗಿರುವ ಕಾರಣ ನೆಲಕ್ಕುರುಳಿದೆ. ಬೆಳೆ ನಷ್ಟವಾಗುವ ಭೀತಿ ಎದುರಾಗಿದೆ. ಹಾಕಿದ ಬಂಡವಾಳ ಕೈಗೆ ಬರುತ್ತದೋ ಇಲ್ಲವೋ ಎನ್ನುವ ಅತಂಕ ಕಾಡಲಾರಂಭಿಸಿದೆ,
ರೈತರಿಗೆ ನಷ್ಟದ ಆತಂಕ
ಮಳೆ ಬಾರದಿದ್ದರೂ ಸಮಸ್ಯೆ, ಬಂದರೂ ಸಮಸ್ಯೆಯಾಗಿದೆ. ಬಿತ್ತನೆ ಮಾಡಿರುವ ಬೆಳೆಗಳು ಇದೇ ರೀತಿ ನೆಲಕ್ಕುರುಳುತ್ತಿದ್ದರೆ ಬೆಳೆ ಕೈಗೆ ಸಿಗದಂತಾಗುತ್ತದೆ. ಈಗ ನೆಲಕಚ್ಚಿರುವ ರಾಗಿ ಬೆಳೆಯನ್ನು ನಿಲ್ಲಿಸಿ ಕಟ್ಟುಗಳು ಕಟ್ಟುವ ಮೂಲಕ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ.
ಈ ಕೆಲಸ ಮಾಡಲಿಕ್ಕೂ ಕೂಲಿ ಭರಿಸಲೇಬೇಕು, ಅಲ್ಲದೆ ಬೆಳೆ ನೆಲಕ್ಕೆ ತಾಗಿ ಮಣ್ಣಾದರೆ ಮೇವಿನ ಕೊರತೆಯೂ ಎದುರಾಗಲಿದೆ.
ಪರಿಹಾರಕ್ಕೆ ಮನವಿ
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಮಳೆಯಿಂದ ರಾಗಿ ನೆಲಕಚ್ಚಿರುವ ಕಾರಣ ರೈತರು ನಷ್ಟಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿದ್ದು, ಕೃಷಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ನಷ್ಟಕ್ಕೆ ಒಳಗಾಗುವ ರೈತರಿಗೆ ಪರಿಹಾರ ದೊರಕಿಸಲು ಕ್ರಮಕೈಗೊಳ್ಳಬೇಕಿದೆ.
ಈಗಾಗಲೇ ಅನೇಕ ರೈತರು ಫಸಲ್ ವಿಮೆ ಯೋಜನೆಯಡಿ ಹಣವನ್ನು ಕಟ್ಟಿದ್ದು, ಕೇವಲ ವಿಮೆ ಹಣ ಪಡೆಯಲು ಸೀಮಿತವಾಗದೆ, ವಿಮಾ ಸಂಸ್ಥೆಯಿಂದ ಪರಿಹಾರ ದೊರಕಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.