ಬೆಂ.ಗ್ರಾ ಜಿಲ್ಲೆ: ಜಿಲ್ಲೆಯ ಸಾಂಪ್ರದಾಯಿಕ ಅರ್ಹ ಕುಶಲಕರ್ಮಿಗಳು, ಎಲ್ಲ ಅರ್ಹ ಕುಶಲಕರ್ಮಿಗಳು, ಆಸಕ್ತ ಯುವಕ ಯುವತಿಯರು ಪ್ರಧಾನಿ ಮಂತ್ರಿ ವಿಶ್ವ ಕರ್ಮ ಯೋಜನೆಯ ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಸಂಸದರಾದ ಡಾ.ಕೆ ಸುಧಾಕರ್ (Dr.K. Sudhakar) ಅವರು ಹೇಳಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಸಿ ಅವರು ಮಾತನಾಡಿದರು.
ಸಾಂಪ್ರದಾಯಿಕ ಕರಕುಶಲತೆಯಲ್ಲಿ ತೊಡಗಿರುವ ಕರಕುಶಲಕರ್ಮಿಗಳಿಗೆ ಬೆಂಬಲ ನೀಡುವ ಹಾಗೂ ಸ್ಥಳೀಯ ಕಲೆ ಮತ್ತು ಕರಕುಶಲ ಉತ್ಪನ್ನಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವರು ಈ ಮಹತ್ವಾಕಾಂಕ್ಷಿ ʼಪಿಎಂ ವಿಶ್ವಕರ್ಮ ಯೋಜನೆʼ ಜಾರಿಗೆ ತಂದಿದ್ದಾರೆ.
ನೇಕಾರರು, ಅಕ್ಕಸಾಲಿಗರು, ಕಮ್ಮಾರರು, ಬಡಗಿ, ಶಿಲ್ಪಿಗಳು, ಚಮ್ಮಾರ, ಮೇಸ್ತ್ರಿ, ಬುಟ್ಟಿ ತಯಾರಿಸುವರು, ಮಡಿವಾಳರು, ಸವಿತ ಸಮಾಜ, ಗೊಂಬೆ ತಯಾರಕರು, ದರ್ಜಿ, ಮೀನುಗಾರಿಕೆ ಬಲೆ ಹೆಣೆಯುವವರು, ಹೂವಿನ ಹಾರ ತಯಾರಿಸುವವರು ಸೇರಿದಂತೆ 18 ಬಗೆಯ ಸಾಂಪ್ರದಾಯಿಕ ಕರಕುಶಲ ಕಲೆಯಲ್ಲಿ ತೊಡಗಿರುವ ಕುಶಲ ಕರ್ಮಿಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ.
ಪಿಎಂ ವಿಶ್ವಕರ್ಮ ಯೋಜನೆಯ ಮೂಲಕ ಕರಕುಶಲ ಮತ್ತು ಕುಶಲಕರ್ಮಿಗಳಿಗೆ 5% ರಷ್ಟು ರಿಯಾಯಿತಿ ಬಡ್ಡಿದರದೊಂದಿಗೆ ರೂ.1 ಲಕ್ಷ (ಮೊದಲ ಕಂತು) ಮತ್ತು ರೂ. 2 ಲಕ್ಷ (ಎರಡನೇ ಕಂತು) ವರೆಗೆ ಸಾಲದ ನೆರವನ್ನು ಒದಗಿಸಲಾಗುತ್ತಿದ್ದು, ಈ ಯೋಜನೆಗೆ 13,000 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.
ಪಿಎಂ ವಿಶ್ವಕರ್ಮ ಯೋಜನೆಯಡಿ ಈವರೆಗೂ 18 ಕಸಬುಗಳ ಕಲಾವಿದರು ಮತ್ತು ಕರಕುಶಲಕರ್ಮಿಗಳಿಗೆ ತರಬೇತಿ ನೀಡಲಾಗಿದೆ. ಜೊತೆಗೆ ಇದುವರೆಗೆ 1.49 ಲಕ್ಷ ಫಲಾನುಭವಿಗಳಿಗೆ ವ್ಯಾಪಾರ ಮಾಡಲು 1,190 ಕೋಟಿ ರೂಪಾಯಿಗಳ ಸಾಲ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಂ.ಎಸ್.ಎಂ. ಇ ಜಂಟಿ ನಿರ್ದೇಶಕರಾದ ದೇವರಾಜು, ಜಿ.ಪಂ ಉಪಕಾರ್ಯದರ್ಶಿ ಶಿವಕುಮಾರ, ಕೌಶಲ್ಯಾಭಿವೃದ್ಧಿ ಅಧಿಕಾರಿ ಜಗನ್ನಾಥ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಮಾಂಜಿ ಇತರರು ಉಪಸ್ಥಿತರಿದ್ದರು.