ಮುಂಬೈ: ಜೆಮಿಮಾ ರೊಡ್ರಿಗಸ್ ಅವರ ಅಜೇಯ ಭರ್ಜರಿ ಶತಕ ಹಾಗೂ ಹರ್ಮನ್‌ಪ್ರೀತ್ ಕೌರ್ ಅವರ ಅರ್ಧಶತಕದ ಬಲದಿಂದ ಭಾರತ (India) ತಂಡವು ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ (Women’s ODI World Cup tournament) ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ (Australia) ವಿರುದ್ಧ 5 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ.
ಈ ಮೂಲಕ ಲೀಗ್ ಹಂತದಲ್ಲಿನ ಆಸೀಸ್ ವಿರುದ್ದದ ಸೋಲಿನ ಸೇಡನ್ನು ಭಾರತೀಯ ವನಿತೆಯರು ಗುರುವಾರ ತೀರಿಸಿಕೊಂಡರು. ಫೋಬೆ ಲಿಚ್ ಫೀಲ್ಸ್ ಶತಕದ ಹೊರತಾಗಿಯೂ ಸೋತು ಆಸೀಸ್‌ನ ಎಂಟನೇ ವಿಶ್ವಕಪ್ ಗೆಲ್ಲುವ ಕನಸು ಭಗ್ನವಾಯಿತು.
🚨 THE HISTORIC MOMENT. 🚨
— Mufaddal Vohra (@mufaddal_vohra) October 30, 2025
– India knocked out Australia and ended their 15 match winning streak. 🇮🇳
pic.twitter.com/20wmHnhEq3
ಇಲ್ಲಿನ ಡಿ.ವೈ ಪಾಟೀಲ್ ಕ್ರಿಕೆಟ್ ಅಕಾಡೆಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ನೀಡಿದ್ದ 339 ರನ್‌ಗಳ ಕಠಿಣ ಗುರಿಯನ್ನು ಬೆಂಬತ್ತಿದ ಭಾರತ ತಂಡ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿತ್ತು. ಆದರೆ ಜೆಮಿಮಾ ರೊಡ್ರಿಗಸ್ ಹಾಗೂ ಹರ್ಮನ್ ಪ್ರೀತ್ ಕೌರ್ ಅವರ 167 ರನ್‌ಗಳ ಜತೆಯಾಟದ ಬಲದಿಂದ 48.3 ಓವರ್ ಗಳಿಗೆ 4 ವಿಕೆಟ್ ನಷ್ಟಕ್ಕೆ 341 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಈ ಗೆಲುವಿನ ಮೂಲಕ ಭಾರತ ಮಹಿಳಾ ತಂಡದ ಚೊಚ್ಚಲ ಮಹಿಳಾ ಏಕದಿನ ವಿಶ್ವಕಪ್ ಗೆಲ್ಲುವ ಕನಸು ಜೀವಂತವಾಗಿ ಉಳಿದುಕೊಂಡಿದೆ. ನವೆಂಬರ್ 2ರಂದು ದಕ್ಷಿಣ ಆಫ್ರಿಕಾ ವಿರುದ್ದ ಭಾರತ ಮಹಿಳಾ ತಂಡವು ಫೈನಲ್ ನಲ್ಲಿ ಕಾದಾಟ ನಡೆಸಲಿದೆ.
ಜೆಮಿಮಾ ಭರ್ಜರಿ ಶತಕ
ಆಸೀಸ್ ನೀಡಿದ ಗುರಿ ಹಿಂಬಾಲಿಸಿದ ಭಾರತ ತಂಡ, 13 ರನ್ ಇದ್ದಾಗ ಶಫಾಲಿ ವರ್ಮಾ ಹಾಗೂ 59 ರನ್‌ಗೆ ಸ್ಮೃತಿ ಮಂಧಾನಾ ಅವರ ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಆದರೆ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಕೊನೆಯವರೆಗೂ ಅಜೇಯರಾಗಿ ಬ್ಯಾಟ್ ಮಾಡಿದ ಜೆಮಿಮಾ ರೊಡ್ರಿಗಸ್ 134 ಎಸೆತಗಳಲ್ಲಿ 14 ಬೌಂಡರಿಗಳೊಂದಿಗೆ 127 ರನ್ (ಅಜೇಯ) ಗಳಿಸಿ ಭಾರತ ತಂಡವನ್ನು ಗೆಲ್ಲಿಸಿದರು.
ನಾಯಕಿ ಹರ್ಮನ್ ಪ್ರೀತ್ ಕೌರ್ (89) ಜತೆ 167 ರನ್‌ಗಳ ನಿರ್ಣಾಯಕ ಜತೆಯಾಟವನ್ನು ಆಡಿದರು.
ಅಮೋಘ ಪ್ರದರ್ಶನ ನೀಡಿದ ಜೆಮಿಮಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ದೀಪ್ತಿ ಶರ್ಮಾ 24 ಹಾಗೂ ರಿಚಾ ಘೋಷ್ 26 ಅವರು ಭಾರತಕ್ಕೆ ಉಪಯುಕ್ತ ಕಾಣಿಕೆ ನೀಡಿದರು.
338 ರನ್ ಕಲೆ ಹಾಕಿದ್ದ ಆಸ್ಟ್ರೇಲಿಯಾ: ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಆಸೀಸ್ ತಂಡದ ನಾಯಕಿ ಅಲಿಸಾ ಹೀಲಿ (5) ಬಹುಬೇಗ ವಿಕೆಟ್ ಒಪ್ಪಿಸಿದರು. ಫೋಬೆ ಲಿಚ್ ಫೀಲ್ಸ್ ಶತಕ (119 ರನ್) ಮತ್ತು ಎಲಿಸ್ ಪೆರಿ (77) ಹಾಗೂ ಆಲ್ಲೆ ಗಾರ್ಡ್ನರ್ (63) ಅವರ ಅರ್ಧಶತಕಗಳ ಬಲದಿಂದ 49.5 ಓವರ್‌ಗಳಿಗೆ 338 ರನ್ ಕಲೆ ಹಾಕಿತು.
ಫೋಬೆ ಲಿಚ್ ಫೀಲ್ಡ್ ಶತಕ
ಒಂದು ತುದಿಯಲ್ಲಿ ಕ್ರೀಸ್‌ನಲ್ಲಿ ತಳವೂರಿ ಬ್ಯಾಟ್ ಮಾಡಿದ ಲಿಚ್ ಫೀಲ್ಡ್, ಭಾರತೀಯ ಬೌಲರ್‌ಗಳನ್ನು ಮನಬಂದಂತೆ ಕಾಡಿದರು.
ಎರಡನೇ ವಿಕೆಟ್‌ಗೆ ಎಲಿಸ್ ಪೆರ್ರಿ ಮತ್ತು ಫೋಬೆ ಲಿಚ್ ಫೀಲ್ಡ್ ಅವರು 155 ರನ್‌ಗಳ ಜತೆಯಾಟವನ್ನು ಆಡಿದರು. ಆ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಒಂದು ತುದಿಯಲ್ಲಿ ಅದ್ಭುತವಾಗಿ ಬ್ಯಾಟ್ ಮಾಡಿದ ಎಲಿಸ್ ಪೆರಿ 88 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 77 ರನ್ ಗಳಿಸಿ. ರಾಧಾ ಯಾದವ್‌ಗೆ ಕ್ಲೀನ್ ಬೌಲ್ಡ್ ಆದರು. ಆಲ್ಲೆ ಗಾರ್ಡ್ನರ್ ಕೂಡ ಅದ್ಭುತ ಇನ್ನಿಂಗ್ಸ್ ಆಡಿದರು.
45 ಎಸೆತಗಳಲ್ಲಿ 4 ಸಿಕರ್ ಹಾಗೂ 4 ಬೌಂಡರಿಗಳೊಂದಿಗೆ 63 ರನ್ ಕಲೆ ಹಾಕಿದರು. ಆ ಮೂಲಕ ತಂಡದ ಮೊತ್ತ 330ರ ಗಡಿ ದಾಟಲು ಪ್ರಮುಖ ಪಾತ್ರವನ್ನು ವಹಿಸಿದರು.
ಶ್ರೀಚರಣ ಅದ್ಭುತವಾಗಿ ಬೌಲ್ ಮಾಡಿ ಎರಡು ವಿಕೆಟ್ ಪಡೆದರೆ, ದೀಪ್ತಿ ಶರ್ಮಾ ಸ್ವಲ್ಪ ದುಬಾರಿಯಾದರೂ ಎರಡು ವಿಕೆಟ್ ಪಡೆದರು.
 
				 
															 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						