
ದೊಡ್ಡಬಳ್ಳಾಪುರ: ನವೆಂಬರ್ 2 ರಂದು ನಡೆಯಲಿರುವ ದೊಡ್ಡಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (TAPMCS) ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ.
ಈ ಹಿನ್ನೆಲೆಯಲ್ಲಿ ಮೂರು ಪಕ್ಷದ ಬೆಂಬಲಿತ ಅಭ್ಯರ್ಥಿಗಳು, ಮುಖಂಡರು ತಾಲೂಕಿನ ಗ್ರಾಮಗಳಲ್ಲಿ ಮತದಾರರ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದಾರೆ.
ಇದೇ ಮೊದಲ ಬಾರಿಗೆ ಈ ಹಿಂದೆ ಕಾಣದಷ್ಟು ದೊಡ್ಡಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (TAPMCS) ಚುನಾವಣೆಗೆ ಬಿರುಸಿನ ಪ್ರಚಾರ ಮಾಡಲಾಗುತ್ತಿದೆ.
13 ನಿರ್ದೇಶಕ ಸ್ಥಾನಗಳನ್ನು ಹೊಂದಿರುವ ಟಿಎಪಿಎಂಸಿಎಸ್ನಲ್ಲಿ ‘ಎ’ ತರಗತಿಗೆ 5 ಸ್ಥಾನ, ‘ಬಿ’ ತರಗತಿಗೆ 8 ಸ್ಥಾನಗಳಿವೆ. 8 ಜನ ನಿರ್ದೇಶಕ ಸ್ಥಾನಗಳ ಪೈಕಿ 2 ಸಾಮಾನ್ಯ ಅಭ್ಯರ್ಥಿಗಳಿಗೆ,1 ಬಿಸಿಎಂ ‘ಬಿ’, 1 ಬಿಸಿಎಂ ‘ಎ’, 2 ಮಹಿಳಾ ಅಭ್ಯರ್ಥಿಗಳಿಗೆ, 1 ಪರಿಶಿಷ್ಟ ಜಾತಿ, 1 ಪರಿಶಿಷ್ಠ ಪಂಗಡಕ್ಕೆ ಮೀಸಲಾಗಿದೆ. ಉಳಿದಂತೆ ಬಿಡಿಸಿಸಿ ಬ್ಯಾಂಕ್ ಪ್ರತಿನಿಧಿಯಾಗಿ 1 ಹಾಗೂ ಸರ್ಕಾರದ ನಾಮನಿರ್ದೇಶನದ ಮೂಲಕ ಒಬ್ಬರು ನೇಮಕವಾಗಲಿದೆ.
ಸಹಕಾರಿ ಕ್ಷೇತ್ರದಲ್ಲಿ ಯಾವುದೇ ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ನಡೆಯುವುದಿಲ್ಲ. ಆದರೂ ಸಹ ಮೂರು ರಾಜಕೀಯ ಪಕ್ಷಗಳೂ ಟಿಎಪಿಎಂಸಿಎಸ್ ಆಡಳಿತದ ಚುಕ್ಕಾಣಿ ನಮ್ಮ ಪಕ್ಷದವರ ಕೈಯಲ್ಲೇ ಇರಬೇಕು ಎನ್ನುವ ಪ್ರತಿಷ್ಟೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ.
ಪ್ರಸ್ತುತ ‘ಎ’ ತರಗತಿಯಿಂದ ನಿರ್ದೇಶಕರಾಗಿದ್ದ ಎಂ.ಗೋವಿಂದರಾಜು, ಎಂ.ವೆಂಕಟೇಶ್, ಡಿ.ಸಿದ್ದರಾಮಯ್ಯ ಅವರು ‘ಎ’ತರಗತಿಗೆ ಸ್ಪರ್ಧಿಸಲು ಪ್ರತಿನಿಧಿಗಳಾಗಿ ಆಯ್ಕೆಯಾಗಿ ಬಂದಿದ್ದು ಟಿಎಪಿಎಂಸಿಎಸ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುವ ಅರ್ಹತೆ ಪಡೆದಿದ್ದಾರೆ.
ಬಿಜೆಪಿ ಅಧಿಕಾರ
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಬಿಜೆಪಿ ಶಾಸಕ ಧೀರಜ್ ಮುನಿರಾಜು ಅಧಿಕಾರದಲ್ಲಿ ಇರುವ ಹಿನ್ನೆಲೆಯಲ್ಲಿ ಟಿಎಪಿಎಂಸಿಎಸ್ನಲ್ಲಿ ಹೆಚ್ಚಿನ ನಿರ್ದೇಶಕ ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು ಎನ್ನುವ ಪ್ರತಿಷ್ಠೆಯಾಗಿದೆ.
ಟಿ.ವೆಂಕಟರಮಣಯ್ಯ ಪಟ್ಟು
ಮತ್ತೊಂದೆಡೆ ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ದೊಡ್ಡಬಳ್ಳಾಪುರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ ನೇತೃತ್ವದ ಕಾಂಗ್ರೆಸ್ ಕೂಡ ಟಿಎಪಿಎಂಸಿಎಸ್ನಲ್ಲಿ ಹೆಚ್ಚಿನ ನಿರ್ದೇಶಕ ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕೆಂದು ಮತಯಾಚನೆ ಕಾರ್ಯದಲ್ಲಿ ತೊಡಗಿದೆ.
ಬಿ.ಮುನೇಗೌಡ ಹೋರಾಟ
ಮತ್ತೊಂದೆಡೆ ಜೆಡಿಎಸ್ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ ನೇತೃತ್ವದಲ್ಲಿ ಮುಖಂಡರು ಎನ್‌ಡಿಎ ಅಭ್ಯರ್ಥಿಗಳ ಪರ ಹೆಚ್ಚಿನ ಮತ ದೊರಕಿಸಲು ಶ್ರಮಿಸುತ್ತಿದ್ದಾರೆ.
ಮುಂಬರಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಈ ಚುನಾವಣೆ ಫಲಿತಾಂಶ ಪರೋಕ್ಷ ಸಂದೇಶ ನೀಡಲಿದೆ ಎನ್ನಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಟಿಎಪಿಎಂಸಿಎಸ್ನಲ್ಲಿ ಹೆಚ್ಚಿನ ನಿರ್ದೇಶಕ ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕೆಂದು ಮೂರು ಪಕ್ಷಗಳು ಜಿದ್ದಿಗೆ ಬಿದ್ದಂತೆ ಮತಯಾಚನೆ ಕಾರ್ಯದಲ್ಲಿ ತೊಡಗಿದ್ದಾರೆ.

ಇಂದು ದೊಡ್ಡಬಳ್ಳಾಪುರ ತಾಲ್ಲೂಕಿನ ಆರೂಢಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ಹರೀಶ್ ಕುಮಾರ್ ನೇತೃತ್ವದಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಿದರು.