ಬೆಂಗಳೂರು: ಜೆಡಿಎಸ್ (JDS) ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಹಲವು ಜಿಲ್ಲಾಧ್ಯಕ್ಷರನ್ನು ಬದಲಿಸುವ ಚಿಂತನೆ ನಡೆದಿದೆ ಎಂದು ಜೆಡಿಎಸ್ ಪ್ರಮುಖರ ಸಮಿತಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ ತಿಳಿಸಿದರು.
ಪಕ್ಷದ ಕಾರ್ಯಾಲಯದಲ್ಲಿ ನಡೆದ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಲವಾರು ತಾಲೂಕು ಮತ್ತು ಜಿಲ್ಲಾ ಘಟಕಗಳ ಪುನಾರಚನೆ ನಂತರ ಡಿ.22ರಂದು ಬೆಂಗಳೂರಿನ ಪಕ್ಷದ ಕಾರ್ಯಾಲಯ ಜೆಪಿ ಭವನದಲ್ಲಿ ಸಭೆ ನಡೆಸಲಾಗುವುದು. ಅದಾದ ಬಳಿಕ ರಾಜ್ಯಾದ್ಯಂತ ಜಿಲ್ಲಾ ಪ್ರವಾಸ ಆರಂಭಿಸಲಾಗುವುದು ಎಂದರು.
ಜಿಬಿಎ5 ಮಹಾನಗರ ಪಾಲಿಕೆಗಳ ಚುನಾವಣೆಗೆ ಜೆಡಿಎಸ್ ಸನ್ನದ್ಧಗೊಳಿಸುವ ಸಲುವಾಗಿ ಉಸ್ತುವಾರಿ ಸಮಿತಿ ಕಾರ್ಯ ನಿರ್ವಹಿಸುತ್ತಿವೆ. ಬೆಳಗಾವಿ ವಿಧಾನಮಂಡಲ ಅಧಿವೇಶನದ ಬಳಿಕ ಪಾಲಿಕೆಯ 369 ವಾರ್ಡ್‌ಗಳಲ್ಲಿ ಪಕ್ಷದ ಸಂಘಟನೆ, ಎನ್‌ಡಿಎ ಮೈತ್ರಿಕೂಟ ಪಕ್ಷ ಬಿಜೆಪಿ ಜತೆ ಸ್ಥಾನಗಳ ಹಂಚಿಕೆ ಸಂಬಂಧ ಮಾತುಕತೆ ಆರಂಭಗೊಳ್ಳಲಿದೆ ಎಂದರು.
ಸಭೆಯಲ್ಲಿ ಶಾಸಕರಾದ ಎ.ಮಂಜು, ಕರೆಮ್ಮ ನಾಯಕ್, ಮಾಜಿ ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ನೇಮಿರಾಜ್ ನಾಯ್ಕ, ದೊಡ್ಡನಗೌಡ ಪಾಟೀಲ್, ಕೆ.ಬಿ.ಪ್ರಸನ್ನಕುಮಾರ್, ಎಚ್.ಎಸ್.ಶಿವಶಂಕರ್, ಸಿ.ವಿ.ಚಂದ್ರಶೇಖರ್, ರಾಜಾ ವೆಂಕಟಪ್ಪ ನಾಯಕ್ ಇದ್ದರು.