ದೊಡ್ಡಬಳ್ಳಾಪುರ: ಜಾನಪದ ಕಲೆ (Folk art), ಸಾಹಿತ್ಯ (Literature), ಸಂಸ್ಕೃತಿಯನ್ನು (Cultural) ಉಳಿಸಿ ಬೆಳೆಸುವುದು ಇಂದಿನ ವಿದ್ಯಾರ್ಥಿ ಮತ್ತು ಯುವಜನರ ಜವಾಬ್ದಾರಿ ಆಗಬೇಕಾಗಿದೆ ಎಂದು ಕಲಾವಿದ ಶ್ಯಾಕಲದೇವನಪುರ ರಾಮಚಂದ್ರ ತಿಳಿಸಿದರು.
ಅವರು ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಾನಪದ ಸಾಂಸ್ಕೃತಿಕ ಕಲಾ ಸಂಘ ವತಿಯಿಂದ ನಡೆದ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಾನಪದ ಸಂಸ್ಕೃತಿಯು ನಮ್ಮ ಪರಂಪರೆಯನ್ನು ಪ್ರತಿನಿಧಿಸುತ್ತದೆ, ಗ್ರಾಮೀಣ ಜನರ ಜೀವನ ವಿಧಾನ, ಕಲೆ ಮತ್ತು ಕಥೆಗಳನ್ನು ಒಳಗೊಂಡಿದ. ಜಾನಪದ ಸಂಸ್ಕೃತಿಯು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಇದು ಎಲ್ಲರನ್ನೂ ಒಳಗೊಂಡಿದೆ ಎಂದರು.
ಕರ್ನಾಟಕ ಜಾನಪದ ಅಕಾಡಮಿ ಪ್ರಶಸ್ತಿ ಪುರಸ್ಜೃತ ಚಿಕ್ಕಮಾರನಹಳ್ಳಿ ಸಿದ್ದಯ್ಯ ಮಾತನಾಡಿ, ಜಾನಪದ ಅಧ್ಯಯನ ಎಂದರೆ ಅದು ಜನ ಸಂಸ್ಕೃತಿಯ ಅಧ್ಯಯನ. ಗಾದೆಗಳು, ಹಾಡುಗಳು, ಕಥೆಗಳು, ಕಲಾಕೃತಿಗಳು, ಹಬ್ಬಗಳು, ಮದುವೆಗಳು, ಜಾನಪದ ನೃತ್ಯಗಳು ಜನಪದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿವೆ.
ನಮ್ಮ ಜನಪದ ಸಂಸ್ಕೃತಿಯ ಶ್ರೀಮಂತಿಕೆಯನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕಾಗಿದೆ. ಜನಪದ ಸಂಸ್ಕೃತಿಯಲ್ಲಿ ಜೀವನ ಮೌಲ್ಯಗಳು ಆಳವಾಗಿ ಅಡಕವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಯಲ್ಲಪ್ಪ ಬಡಣ್ಣವರ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮಾಳಯ್ಯ, ಜಾನಪದ ಕಲಾವಿದರುಗಳಾದ ಶಶಿಕುಮಾರ್, ದೊಡ್ಡಕುಕ್ಕನಹಳ್ಳಿ ಕೃಷ್ಣಪ್ಪ, ಹನುಮಂತರಾಯಪ್ಪ ಮುಂತಾದವರು ಭಾಗವಹಿಸಿದ್ದರು.
ಸಂಸ್ಕೃತಿ ಸಂಭ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಕಲಾವಿದರು ಜಾನಪದಗೀತೆ ಮತ್ತು ನೃತ್ಯ, ಭಾವಗೀತೆಗಳ ಗಾಯನ, ಸೋಮನಕುಣಿತ, ಕೋಲಾಟ, ಜಾನಪದ ನೃತ್ಯ ಮತ್ತು ಸಾಮಾಜಿಕ ನಾಟಕ ಪ್ರದರ್ಶನ ನಡೆದವು.