ಬೆಂಗಳೂರು: “ನಿನ್ನೆ ರಾತ್ರಿ ಮದುವೆಯೊಂದರಲ್ಲಿ ನಾನು ಹಾಗೂ ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದು ನಿಜ. ರಾಜ್ಯ ಹಾಗೂ ಪಕ್ಷದ ವಿಚಾರ ಮಾತನಾಡಿದ್ದೇವೆ. ನಾನು ಹಾಗೂ ಸತೀಶ್ ಜಾರಕಿಹೊಳಿ ಸಹೋದ್ಯೋಗಿಗಳು. ನಮ್ಮನ್ನು ವೈರಿಗಳಂತೆ ಯಾಕೆ ನೋಡುತ್ತೀರಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಪ್ರಶ್ನಿಸಿದ್ದಾರೆ.
ಕೆಐಎಡಿಬಿಎ ನೂತನ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.
ಸತೀಶ್ ಜಾರಕಿಹೋಳಿ ಅವರ ಭೇಟಿ ಬಗ್ಗೆ ಕೇಳಿದಾಗ, “ನಾವು ಮಧ್ಯಾಹ್ನ ಸಚಿವ ಸಂಪುಟ ಸಭೆಯಲ್ಲಿ ಇರುತ್ತೇವೆ, ರಾತ್ರಿ ಊಟಕ್ಕೆ ಸೇರುತ್ತೇವೆ, ಬೆಳಗ್ಗೆ ತಿಂಡಿಗೆ ಸೇರುತ್ತೇವೆ. ಇವೆಲ್ಲ ಇದ್ದೇ ಇರುತ್ತವೆ. ರಾಜಕೀಯದಲ್ಲಿ ಸ್ನೇಹ, ಬಾಂಧವ್ಯ, ನೆಂಟಸ್ಥನ ಇದ್ದೇ ಇರುತ್ತದೆ” ಎಂದರು.
“ಈಗ ನಾನು ಹಾಗೂ ಎಂ.ಬಿ. ಪಾಟೀಲ್ ಅವರು ಸುಮಾರು ಒಂದು ಗಂಟೆ ಕಾಲ ಮಾತಾಡಿದ್ದೇವೆ. ರಾಜ್ಯಕ್ಕೆ ಬಂಡವಾಳ ಹೂಡಿಕೆದಾರರನ್ನು ಹೇಗೆ ಆಕರ್ಷಿಸಬೇಕು. ಆಂಧ್ರ ಪ್ರದೇಶ ಹಾಗೂ ತಮಿಳುನಾಡು ಹೇಗೆ ನಮಗೆ ಸ್ಪರ್ಧೆ ನೀಡುತ್ತಿದೆ. ತೆಲಂಗಾಣದಲ್ಲಿ ಸದ್ಯದಲ್ಲೇ ಜಾಗತಿಕ ಸಮಾವೇಶ ನಡೆಯಲಿದ್ದು, ಜಾಗತಿಕ ಮಟ್ಟದಲ್ಲಿ ನಾವು ಹೇಗೆ ಸ್ಪರ್ಧೆ ಮಾಡಬೇಕು ಎಂದು ಚರ್ಚೆ ಮಾಡಿದ್ದೇವೆ. ಈ ರೀತಿ ರಾಜ್ಯದ ಪ್ರಗತಿ ಬಗ್ಗೆ ಚರ್ಚೆ ಮಾಡುವುದು ಸಹಜ.” ಎಂದರು.
ಕೆಕೆಆರ್ ಡಿಬಿ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮದ ಬಗ್ಗೆ ಮಾತನಾಡಿ, “ಕರ್ನಾಟಕದಲ್ಲಿ ಉದ್ಯಮ ಮಾಡುವವರನ್ನು ಗೌರವಿಸಬೇಕು, ಅವರ ವ್ಯವಹಾರ, ಅಧಿಕಾರಿಗಳ ಭೇಟಿಗೆ ಅನುಕೂಲ, ಅವರ ಕಡತಗಳ ತ್ವರಿತ ವಿಲೇವಾರಿ ಉದ್ದೇಶಕ್ಕೆ ರಾಜ್ಯ ಸರ್ಕಾರವು ಎಂ.ಬಿ ಪಾಟೀಲ್ ಅವರ ನೇತೃತ್ವದಲ್ಲಿ ಕೆಕೆಆರ್ ಡಿಬಿ ನೂತನ ಕಚೇರಿ ನಿರ್ಮಿಸಿದೆ. ಇಷ್ಟು ದಿನ ಬಾಡಿಗೆ ಕಟ್ಟಡದಲ್ಲಿ ಇದ್ದರು, ಈಗ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. ಈ ಕಚೇರಿಯಿಂದ ವಿಧಾನಸೌಧಕ್ಕೆ, ಬಸ್ ಹಾಗೂ ರೈಲ್ವೇ ನಿಲ್ದಾಣಕ್ಕೆ ಸಮೀಪವಾಗಿದ್ದು, ಇಲ್ಲಿ ಕಚೇರಿ ನಿರ್ಮಿಸಲಾಗಿದೆ” ಎಂದು ತಿಳಿಸಿದರು.
ಭ್ರಷ್ಟಾಚಾರ ವರದಿ ಅಧ್ಯಯನ ಮಾಡಿ ಅಶೋಕ್ ಅವರು ಅಧಿವೇಶನದಲ್ಲಿ ಪ್ರಸ್ತಾಪಿಸಲಿ
63% ಭ್ರಷ್ಟಾಚಾರ ರಾಜ್ಯದಲ್ಲಿದೆ ಎಂಬ ಉಪಲೋಕಾಯುಕ್ತ ಅವರ ವರದಿ ಬಗ್ಗೆ ಆರ್.ಅಶೋಕ್ ಅವರು ಮಾತನಾಡಿರುವ ಬಗ್ಗೆ ಕೇಳಿದಾಗ, “ಪಾಪ, ಆರ್.ಅಶೋಕ್ ಅವರಿಗೆ ಅದು ಯಾರ ಕಾಲದ ವರದಿ ಎಂದು ಗೊತ್ತಿಲ್ಲ. ಅವರು ಮೊದಲು ಈ ವರದಿ ಯಾರ ಕಾಲದ್ದು ಎಂದು ಓದಿಕೊಳ್ಳಲಿ. ಅವರು ಈ ವಿಚಾರವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಲಿ, ಅಲ್ಲಿಯೇ ಉತ್ತರ ನೀಡುತ್ತೇವೆ” ಎಂದು ತಿರುಗೇಟು ನೀಡಿದರು.
ದೆಹಲಿಗೆ ಸರ್ವಪಕ್ಷ ನಿಯೋಗ ಹೋಗುವ ದಿನಾಂಕ ನಿಗದಿಯಾಯಿತೇ ಎಂದು ಕೇಳಿದಾಗ, “ಈ ಬಗ್ಗೆ ಇನ್ನು ಚರ್ಚೆ ಮಾಡಬೇಕಿದೆ. ಕೇಂದ್ರ ಸಚಿವರು ಸಂಸತ್ ಅಧಿವೇಶನದಲ್ಲಿ ಕಾರ್ಯನಿರತರಾಗಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಡಿ. 8ರಂದು ನಡೆಸಲು ತೀರ್ಮಾನಿಸಲಾಗಿದ್ದ ಸಭೆ ಮುಂದೂಡಿದ್ದೇವೆ. ಅವರು ಈ ಬಗ್ಗೆ ಪತ್ರವನ್ನು ಬರೆದಿದ್ದರು. ಪ್ರಧಾನಮಂತ್ರಿಗಳು ಪ್ರಹ್ಲಾದ್ ಜೋಷಿ ಅವರೊಂದಿಗೆ ಸಭೆ ಇಟ್ಟುಕೊಂಡಿದ್ದಾರೆ. ಅಂದು ನಿರ್ಮಲಾ ಸೀತಾರಾಮನ್ ಅವರು ಮಸೂದೆ ಮಂಡನೆ ಮಾಡಬೇಕಿದೆ. ಸೋಮಣ್ಣ ಅವರು ಕೂಡ ಅಂದು ಸಭೆಯಲ್ಲಿ ಭಾಗವಹಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಅವರಿಗೆ ಹಾಗೂ ನಮಗೆ ಅನುಕೂಲವಾಗುವ ದಿನಾಂಕವನ್ನು ನಿಗದಿ ಮಾಡಲಾಗುವುದು” ಎಂದು ತಿಳಿಸಿದರು.
ಪ್ರಚಾರಕ್ಕೆ ಮಾತನಾಡಬಾರದು, ಕನಿಷ್ಟ ಪರಿಜ್ಞಾನ ಇರಬೇಕು
ನಾನು ನನ್ನ ವಾಚ್ ವಿಚಾರವಾಗಿ ಲೋಕಾಯುಕ್ತ ಸೇರಿದಂತೆ ಎಲ್ಲೆಲ್ಲಿ ಮಾಹಿತಿ ನೀಡಬೇಕೋ, ಎಲ್ಲಾ ನೀಡಿದ್ದೇನೆ. ನಾನು ಈ ವಿಚಾರದಲ್ಲಿ ಸುಳ್ಳು ಹೇಳಿದ್ದರೆ ಇಂದೇ ರಾಜೀನಾಮೆ ನೀಡುವೆ, ಇಲ್ಲವಾದರೆ ಅವರು ರಾಜೀನಾಮೆ ನೀಡುತ್ತಾರಾ..” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸವಾಲೆಸೆದರು.
ವಾಚ್ ಕದ್ದದ್ದೋ, ಕೊಂಡದ್ದೋ ಎಂಬ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾರಾಯಣಸ್ವಾಮಿ ಅವರಿಗೆ ಇನ್ನೂ ಅನುಭವವಿಲ್ಲ. ಯಾವುದಾದರೂ ವಿಚಾರದ ಬಗ್ಗೆ ಮಾತನಾಡಬೇಕಾದರೆ ಕನಿಷ್ಟ ಪರಿಜ್ಞಾನ ಇರಬೇಕು. ಬರೀ ಪ್ರಚಾರಕ್ಕೆ ಮಾತನಾಡುವುದಲ್ಲ. ಅವರಿಗಿಂತ ಹೆಚ್ಚು ಜವಾಬ್ದಾರಿಯಿಂದ ನಾನು ವರ್ತಿಸುತ್ತೇನೆ. ಅವರೂ ಜವಾಬ್ದಾರಿಯಿಂದ ಕೆಲಸ ಮಾಡುವುದನ್ನು ಕಲಿಯಬೇಕು. ನಾನು ಪ್ರದರ್ಶಿಸಿರುವ ದಾಖಲೆ ವಿಚಾರ ಒತ್ತಟ್ಟಿಗೆ ಇರಲಿ, ಅವರೇ ಹೋಗಿ ಲೋಕಾಯುಕ್ತದಲ್ಲಿ ಪರಿಶೀಲನೆ ಮಾಡಲಿ. ಅಲ್ಲಿ ಸಲ್ಲಿಸಿರುವ ಆದಾಯ ಅಫಿಡವಿಟ್ ಸಾರ್ವಜನಿಕ ದಾಖಲೆಯಾಗಿದ್ದು, ಅದನ್ನು ಅವರೂ ಪಡೆಯಬಹುದು.
2018 ಹಾಗೂ 2023ರಲ್ಲಿ ತೋರಿಸಿಲ್ಲ ಎಂಬುದು ಅವರ ವಾದ ಎಂದು ಕೇಳಿದಾಗ, “ಅವರಿಗೇನು ಗೊತ್ತು? 2025 ರಲ್ಲೂ ಸಲ್ಲಿಕೆ ಮಾಡಿದ್ದೀನಲ್ಲಾ..?” ಎಂದು ತಿಳಿಸಿದರು.
ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸುತ್ತಾರಂತೆ ಎಂದು ಕೇಳಿದಾಗ, “ಸದನದಲ್ಲೂ ಪ್ರಸ್ತಾಪಿಸಲಿ, ಬೇರೆ ಎಲ್ಲಾದರೂ ಪ್ರಸ್ತಾಪಿಸಲಿ. ಯಾರು ಬೇಡ ಎನ್ನುತ್ತಾರೆ. ದೇಶದೆಲ್ಲೆಡೆ ಚರ್ಚೆ ಮಾಡಲಿ. ನನ್ನ ದಾಖಲೆ ಅವರಿಗೆ ತೋರಿಸುವ ಅಗತ್ಯವಿಲ್ಲವಾದರೂ ನಾನು ಆ ವಾಚ್ ಕದ್ದಿದ್ದೇನೆ ಎಂದು ಹೇಳಿದ್ದಾರಲ್ಲ ಅದಕ್ಕೆ ತೋರಿಸಿರುವೆ” ಎಂದು ತಿರುಗೇಟು ನೀಡಿದರು.
ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ:
ಇದಕ್ಕೂ ಮುನ್ನ ಗುರುವಾರ ಬೆಳಗ್ಗೆ ಟ್ವೀಟ್ ಮೂಲಕ ನಾರಾಯಣಸ್ವಾಮಿ ಅವರಿಗೆ ತಿರಗೇಟು ನೀಡಿದ ಶಿವಕುಮಾರ್ ಅವರು, “ಮಿಸ್ಟರ್ ನಾರಾಯಣಸ್ವಾಮಿ, ಇಲ್ಲಿದೆ ನೋಡಿ ಲೋಕಾಯುಕ್ತಕ್ಕೆ ನಾನು ಸಲ್ಲಿಸಿರೋ ಅಫಿಡವಿಟ್! ಜವಾಬ್ದಾರಿಯುತ ಸ್ಥಾನದಲ್ಲಿರೋ ನೀವು ನಿಮ್ಮ ಬಾಯಿ ತೆವಲಿಗಾಗಿ ಮನಸ್ಸಿಗೆ ಬಂದಂತೆ ಸುಳ್ಳು ಹೇಳಬಾರದು. ಇದು ನಿಮಗೆ ಘನತೆ ತರುವುದಿಲ್ಲ. ನಾನು ಪಾರದರ್ಶಕ ವ್ಯಕ್ತಿ. ಏನನ್ನೂ ಮುಚ್ಚಿಟ್ಟುಕೊಳ್ಳಬಾರದು ಅಂತಲೇ ನಿಜ ಹೇಳಿದ್ದೇನೆ. ನನಗೆ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ನಮಗೆ ಇಷ್ಟವಾದ ವಾಚ್ ಕಟ್ಟಿಕೊಳ್ಳುವ ಯೋಗ್ಯತೆ ಇಲ್ಲವೇ? ಹಕ್ಕು ಇಲ್ಲವೇ..? “ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ” ಆಡಬೇಡಿ. ನಿಮಗಿರೋ ಸಾಂವಿಧಾನಿಕ ಅಧಿಕಾರ, ಜವಾಬ್ದಾರಿಯನ್ನು ವಿವೇಕದಿಂದ ನಿರ್ವಹಿಸಿ. ಅವಿವೇಕಿಯಂತೆ ಆಡಬೇಡಿ..! ಬೇಕಿದ್ದರೆ ಲೋಕಾಯುಕ್ತ ಕಚೇರಿಗೆ ಹೋಗಿ ನನ್ನ ಅಫಿಡವಿಟ್ ಚೆಕ್ ಮಾಡಿಕೊಳ್ಳಿ” ಎಂದು ಹರಿಹಾಯ್ದರು.