ಬೆಳಗಾವಿ: ಬಿಬಿಎಂಪಿ (BBMP) ತ್ಯಾಜವಿಲೇವಾರಿ ಘಟಕದಿಂದ ದೊಡ್ಡಬಳ್ಳಾಪುರ ತಾಲೂಕಿನ ಜನತೆ ನೆಮ್ಮದಿ ಕಳೆದುಕೊಂಡಿರುವ ಬೆನ್ನಲ್ಲೇ, ಗುಂಡ್ಲಹಳ್ಳಿ ಸಮೀಪ 134.10 ಎಕರೆ ಜಮೀನಿನಲ್ಲಿ ಮತ್ತೆ ಟೆರಾಫಾರ್ಮ ತ್ಯಾಜ್ಯ ವಿಲೇವಾರಿ ಘಟಕ (Terraforma Waste Disposal Unit) ಆರಂಭ ಮಾಡಲು ಸರ್ಕಾರ ಮುಂದಾಗಿದೆಯೇ ಎಂಬ ಆತಂಕ ಎದುರಾಗಿದೆ.
ಬೆಳಗಾವಿ ವಿಧಾನಸಭೆ ಕಲಾಪದ ಪ್ರಶ್ನೋತ್ತರ ಕಲಾಪದ ವೇಳೆ ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಈ ಹಿಂದೆ ಮುಚ್ಚಿರುವ ಕಸ ಸಂಗ್ರಹಗಾರವನ್ನ ಸ್ಥಳಾಂತರಿಸಬೇಕು ಎನ್ನುವ ಶಾಸಕ ಧೀರಜ್ ಮುನಿರಾಜು ಅವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಅವರು ಈ ಕುರಿತು ಉತ್ತರ ನೀಡಿದರು.
“ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿ, ಗುಂಡ್ಲಹಳ್ಳಿಯಲ್ಲಿ (ಟೆರಾಫಾರ್ಮ ಜಮೀನು, ಮತ್ತು ಖಾಸಗಿ ಜಮೀನು ಸೇರಿ) ಒಟ್ಟು 134.10 ಎಕರೆ ಪ್ರದೇಶವನ್ನು ನಿಗದಿಪಡಿಸಲಾಗಿದೆ” ಎಂದು ಹೇಳಿದ್ದಾರೆ.
ಆ ಮೂಲಕ ಮತ್ತೊಂದು ಬಿಬಿಎಂಪಿ ತ್ಯಾಜ್ಯ ಘಟಕದ ಕಂಟಕ ದೊಡ್ಡಬಳ್ಳಾಪುರ ಜನತೆಗೆ ಎದುರಾಗಿದೆ.
ಜನರ ವಿರೋಧಕ್ಕೆ ಕಾರಣವಾಗುತ್ತದೆ
ಕಸ ವಿಲೇವಾರಿ ಘಟಕ ಮತ್ತೆ ತೆರೆದರೆ ಜನರ ವಿರೋಧಕ್ಕೆ ಕಾರಣವಾಗುತ್ತದೆ. ಈಗಾಗಲೇ ಸಂಘಟನೆಗಳು, ಸ್ಥಳೀಯರು ಹೋರಾಟ ಆರಂಭಿಸಲು ಮುಂದಾಗಿದ್ದಾರೆ. ಅಲ್ಲದೆ ಪರಿಸರ ಮಾಲಿನ್ಯದ ಕುರಿತು ಸರ್ಕಾರ ಪರಿಗಣಿಸಿಲ್ಲ ಎಂದು ಶಾಸಕ ಧೀರಜ್ ಮುನಿರಾಜು ಅವರು ಮನವಿ ಮಾಡಿದರು.
ಕಸ ವಿಲೇವಾರಿಯಿಂದ ತೊಂದರೆಯಿಲ್ಲ; ರೈತರ ಮನವೊಲಿಸಿ
ಈಗ ತಂತ್ರಜ್ಞಾನ ಮುಂದುವರೆದಿದೆ. ಜನರಿಗೆ ಮನವರಿಕೆ ಮಾಡಿ ನಾನು ಬರುತ್ತೇನೆ. ಈ ಘಟಕಗಳನ್ನು ನಗರದ ನಾಲ್ಕೈದು ಕಡೆ ಮಾಡುತ್ತೇವೆ.
ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಇದೇ ರೀತಿಯ ಘಟಕವನ್ನು ನಾನು ಕನಕಪುರದಲ್ಲಿಯೂ ತೆರೆಯಲು ಹೊರಟಿದ್ದೇನೆ. ಬಿಡದಿಯಲ್ಲಿಯೂ ಮಾಡುತ್ತಿದ್ದೇವೆ, ನಗರದ ಒಳಭಾಗದಲ್ಲಿ, ದಾಸರಹಳ್ಳಿ, ರಾಮಲಿಂಗಾರೆಡ್ಡಿ ಅವರ ಕ್ಷೇತ್ರದಲ್ಲಿಯೂ ಸಣ್ಣ ಪ್ರಮಾಣದಲ್ಲಿ ಕೆಲಸ ಮಾಡಲಾಗುತ್ತಿದೆ ಎಂದರು.
ಬ್ಲಾಕ್ ಸೋಲ್ಜರ್ ಫ್ಲೈ ಬಳಸಿ ಕಸದಿಂದ ಗೊಬ್ಬರ
ಬೆಂಗಳೂರಿನ ಸುತ್ತಲಿನ ಪ್ರದೇಶದ ಕಸ ಸೇರಿ 2,500 ಟನ್ ಸೇರಿ ನಗರದಲ್ಲಿ 8 ಸಾವಿರ ಟನ್ ಕಸ ಉತ್ಪಾದನೆಯಾಗುತ್ತದೆ ಇದನ್ನು ಎಲ್ಲಿ ಹಾಕುವುದು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಮಂಗಳೂರಿನಲ್ಲಿ ರೇಷ್ಮೆ ಹುಳ ಮಾದರಿಯ ಬ್ಲಾಕ್ ಸೋಲ್ಜರ್ ಫ್ಲೈ ಬಳಸಿಕೊಂಡು ಕಸವನ್ನು ಗೊಬ್ಬರ ಮಾಡಲಾಗಿದೆ.
ಇದು ಕಸವನ್ನು ತಿಂದು ಗೊಬ್ಬರ ಮಾಡುತ್ತದೆ. ಈ ಪ್ರಯೋಗವನ್ನು ಬೆಂಗಳೂರಿನಲ್ಲೂ ಪ್ರಯೋಗಿಸಲಾಗಿವುದು. ಇದರ ಬಗ್ಗೆ ಪ್ರಧಾನಿ ಮೋದಿಯವರು ಸಹ ಎಕ್ಸ್ ಮಾಡಿದ್ದರು ಎಂದರು.
ಕಸದ ಮಾಫಿಯಾ ನಿಯಂತ್ರಣಕ್ಕೆ ಕಾನೂನಿನಲ್ಲಿರುವ ಅವಕಾಶಗಳನ್ನು ನೋಡಲಾಗುವುದು
ಕಸದ ಮಾಫಿಯಾವನ್ನು ಬಗ್ಗುಬಡಿಯಲು ಹೊಸ ಕಾಯ್ದೆ ತನ್ನಿ ವಿರೋಧ ಪಕ್ಷವು ಬೆಂಬಲ ನೀಡುತ್ತದೆ ಎಂದು ಅಶೋಕ್ ಅವರು ಹೇಳಿದಾಗ ಅದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಅವರು, ಕಸದ ಮಾಫಿಯಾ ಮಟ್ಟ ಹಾಕಲು ಕಾನೂನಿನಲ್ಲಿ ಏನೆಲ್ಲಾ ಅವಕಾಶವಿದೆ ಎಂಬುದನ್ನು ನೋಡುತ್ತೇನೆ. ಇದರ ಬಗ್ಗೆ ಕ್ರಮ ತಗೆದುಕೊಳ್ಳಲಾಗುವುದು.
ಬಿಜೆಪಿ ಸಮಯದಲ್ಲಿ 89 ಪ್ಯಾಕೇಜ್ ಗಳನ್ನು ಕಸ ವಿಲೇವಾರಿಗೆ ತರಲಾಗಿತ್ತು. ಇದನ್ನು ಜಾರಿಗೆ ತರಲು ಆಗಲೇ ಇಲ್ಲ. ನ್ಯಾಯಾಲಯಕ್ಕೆ ತೆರಳಿದ್ದರು. ಈಗ ಏನೇನೋ ಮಾಡಿ 33 ಪ್ಯಾಕೇಜ್ ಗಳನ್ನು ತರಲಾಗಿದೆ ಎಂದರು.
ಹೊಸ ಘಟಕ ಮಾಡಿ, ಹಳೆ ಘಟಕ ಬೇಡ
ಬಳಿಕ ಮಾತನಾಡಿದ ಶಾಸಕ ಧೀರಜ್ ಮುನಿರಾಜು, ವಯಕ್ತಿಕವಾಗಿ ಭೇಟಿ ಮಾಡಿದಾಗ ಉಪಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಆದರೆ ನನ್ನ ಮನವಿ ಒಂದೇ ಇದೇ ಸಿದ್ದರಾಮಯ್ಯ ಸರ್ಕಾರದ ಅವರ ಅವಧಿಯಲ್ಲಿ ಮಾಲಿನ್ಯದ ಕಾರಣ, ನಿಯಮ ಉಲ್ಲಂಘನೆ ಮಾಡಿದ ಕಾರಣ ಟೆರಾಫಾರ್ಮ ಮುಚ್ಚಿರುವ ಘಟಕ, ಇದನ್ನು ಮುಚ್ಚಿ 9 ವರ್ಷ ಆಗಿದೆ. ಆದಾಗ್ಯೂ ತ್ಯಾಜ್ಯ ತೆರವು ಮಾಡಿಲ್ಲ.
ಹೊಸ ಘಟಕ ಮಾಡಿ. ಆದರೆ ಟೆರಾಫಾರ್ಮ ಘಟಕ ಮತ್ತೆ ಆರಂಭಕ್ಕೆ ಸಾರ್ವಜನಿಕರ ವಿರೋಧವಿದೆ. ಘಟಕ ಆರಂಭ ಮಾಡಬೇಡಿ ಎಂದರು.