ದೊಡ್ಡಬಳ್ಳಾಪುರ: ನಗರದ ಮಹಿಳಾ ಆರಕ್ಷಕ ಠಾಣೆಯ ವತಿಯಿಂದ, ಎಂಎಸ್‌ವಿ ಪಬ್ಲಿಕ್ ಶಾಲೆಯ (MSV Public School) ವಿದ್ಯಾರ್ಥಿಗಳಿಗೆ ತೆರೆದ ಮನೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಎಂ.ಎಸ್.ವಿ. ಪಬ್ಲಿಕ್ ಶಾಲೆಯ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಭಾಗವಹಿಸಿ, ಪೊಲೀಸ್ ಠಾಣೆಯಲ್ಲಿ ಪೊಲೀಸರ ಕಾರ್ಯವೈಖರಿಗಳ ಪರಿಚಯ ಪಡೆದರು.
ಈ ವೇಳೆ ಮಾತನಾಡಿದ ಇನ್ಸ್ಪೆಕ್ಟರ್ ಡಾ.ಎಂ.ಬಿ.ನವೀನ್ ಕುಮಾರ್ (M.B. Naveen Kumar) ಅವರು, ಆನ್ ಲೈನ್ ಗೇಮ್, ಪೊಕ್ಸೋ ಕಾಯ್ದೆ, ಸಾಮಾಜಿಕ ಜಾಲತಾಣಗಳ ಸಾಧಕ ಬಾಧಕಗಳ ಬಗ್ಗೆ ವಿದ್ಯಾರ್ಥಿನಿಯರಿಗೆ ತೆರೆದ ಮನೆ ಕಾರ್ಯಕ್ರಮ ಅಡಿಯಲ್ಲಿ ಅರಿವು ಮೂಡಿಸಿದರು.
ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಜೀತ ಪದ್ಧತಿ, ಶಾಲೆ ಬಿಟ್ಟ, ನಿರ್ಗತಿಕ, ಭಿಕ್ಷೆ, ಚಿಂದಿ ಆಯುವ ಮಕ್ಕಳ ರಕ್ಷಣೆ ಕುರಿತು ಮಾಹಿತಿ ನೀಡಿದರು. ಅಲ್ಲದೆ ವಿದ್ಯಾರ್ಥಿಗಳು ಯಾವುದೇ ಪರಿಸ್ಥಿತಿಯಲ್ಲಿ ಧೈರ್ಯಗೆಡದೆ ಆರಕ್ಷಕ ಠಾಣೆಯ ಸಹಾಯವನ್ನು ಪಡೆಯಬಹುದು, ಯಾವಾಗಲೂ ಮಕ್ಕಳ ಜೊತೆಯಲ್ಲಿ ನಾವಿರುತ್ತೇವೆ ಎಂಬ ಆಶ್ವಾಸನೆಯನ್ನು ಮೂಡಿಸಿದರು.
ಶಾಲಾ ಕಲಿಕೆಯ ಸಮಯದಲ್ಲಿ ಏಕಾಗ್ರತೆಯನ್ನು ಸಾಧಿಸುವ ಬಗ್ಗೆ ಹಾಗೂ ಸಮಯಪಾಲನೆಯ ಬಗ್ಗೆ ತಿಳಿಸಿಕೊಟ್ಟರು. ಆರೋಗ್ಯಕರ ಜೀವನಶೈಲಿಗೆ ಉತ್ತಮ ಆಹಾರ ಪದ್ಧತಿ ಹಾಗೂ ಕ್ರೀಡೆಯ ಮಹತ್ವದ ಬಗ್ಗೆಯೂ ಸಹ ತಿಳಿಸಿಕೊಟ್ಟರು.
ಮಕ್ಕಳ ಹಕ್ಕುಗಳ ರಕ್ಷಣೆ, ಲೈಂಗಿಕ ದೌರ್ಜನ್ಯ, ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳ ರಕ್ಷಣೆ, ಪೊಲೀಸ್ ಇಲಾಖೆಯ ಕಾರ್ಯಚಟುವಟಿಕೆ, ವೈಯರ್‌ಲೆಸ್ ವಾಕಿಟಾಕಿ, ಗನ್, ಬಂದೂಕು, ರೈಫಲ್ ಎಸ್‌ಎಲ್‌ಆರ್ ರೈಫಲ್, ಪರೇಡ್ ಸೇರಿದಂತೆ ಠಾಣೆಯ ಕಾರ್ಯ ವೈಖರಿಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಟೇಕ್ವಾಂಡೋ ದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಎಂಎಸ್‌ವಿ ಶಾಲೆಯ ವಿದ್ಯಾರ್ಥಿನಿ ಹರ್ಷಿತಾರನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕೆಂದು ತಿಳಿಸಿ, ಆಕೆಯ ಸಾಧನೆಯನ್ನು ಕೊಂಡಾಡಿದರು.
ಸಬ್ ಇನ್ಸ್ ಪೆಕ್ಟರ್ ಶುಭಾ ಮಾತನಾಡಿ, ವಿದ್ಯಾರ್ಥಿಗಳ ಯಾವುದೇ ಸಮಸ್ಯೆಗಳಿಗೆ ಸಹಾಯವಾಣಿ 1098 ಅಥವಾ 112 ಗೆ ಕರೆ ಮಾಡುವುದು ಹಾಗೂ ಮಹಿಳಾ ಸಹಾಯವಾಣಿಯ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.