
ಶಿವಮೊಗ್ಗ: ಶಾಸಕ ಬಸನಗೌಡ ಪಾಟೀಲ ಯತ್ನಾಳ (Basana Gouda Patila Yatnal) ನನ್ನ ವಿರುದ್ದ ಪದೇ ಪದೆ ಸುಳ್ಳು ಆರೋಪಗಳ ಮಾಡುತ್ತಿದ್ದಾರೆ. ಅವರ ವಿರುದ್ಧ ರೂ.1 ಇಲ್ಲವೇ ರೂ.1 ಕೋಟಿ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y. Vijayendra) ಹೇಳಿದರು.
‘ಡಿ.ಕೆ.ಶಿವಕುಮಾರ್ ಸಿಎಂ ಹಾಗೂ ವಿಜಯೇಂದ್ರ ಡಿಸಿಎಂ ಆಗಲು ಯೋಜನೆ ನಡೆದಿದ್ದು, ಡಿ.ಕೆ.ಶಿವಕುಮಾರ್ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿಗೆ ವಿಜಯೇಂದ್ರ ಕರೆದೊಯ್ದು ಚರ್ಚೆ ನಡೆಸಿದ್ದಾರೆ’ ಎಂಬ ಬಸನಗೌಡ ಪಾಟೀಲ ಯತ್ನಾಳ ಆರೋಪ ಕುರಿತ ಪ್ರಶ್ನೆಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಯತ್ನಾಳ ಅವರಿಗೆ ನನ್ನ ಬಗ್ಗೆ ಮಾತನಾಡದಿದ್ದರೆ ಊಟ ಸೇರುವುದಿಲ್ಲ. ನನ್ನ ತಾಳ್ಮೆಗೂ ಮಿತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕುರ್ಚಿ ಗದ್ದಲದಲ್ಲಿ ಅಭಿವೃದ್ಧಿ ಕಾರ್ಯ ಹಾಗೂ ರೈತರ ಹಿತ ಕಡೆಗಣಿಸಲ್ಪಟ್ಟಿದೆ. ಯತೀಂದ್ರ ಸಿದ್ದರಾಮಯ್ಯ ಅವರೇ ಕಾಂಗ್ರೆಸ್‌ನ ಹೈಕಮಾಂಡ್ ಸಿದ್ದರಾಮಯ್ಯನವರೇ ಇರಬಹುದೇ ಎಂಬ ಸಂದೇಹ ಕಾಡುತ್ತಿದೆ. ಹೈಕಮಾಂಡ್ ರೀತಿ ವರ್ತಿಸುತ್ತಾ ಯತೀಂದ್ರ ಸಿಎಂ ಸ್ಥಾನದ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ.
ಖಾಸಗಿಯಾಗಿ ಮಾತಾಡುವಾಗ ಸ್ವತಃ ಕಾಂಗ್ರೆಸ್ ಶಾಸಕರೇ ಯತೀಂದ್ರ ಅವರನ್ನು ಪಕ್ಷದ ಹೈಕಮಾಂಡ್ ಎಂದು ಕಾಲೆಳೆಯುತ್ತಾರೆ ಎಂದು ವರದಿಯಾಗಿದೆ.