
ದೊಡ್ಡಬಳ್ಳಾಪುರ: ತಾಲೂಕಿನ ಮಧುರೆ ಹೋಬಳಿಯ ಪುರುಷನಳ್ಳಿ ಗ್ರಾಮದ ಶ್ರೀ ಸಿದ್ದಗಂಗಾ ಗ್ರಾಮಾಂತರ ಪ್ರೌಢಶಾಲೆಯಲ್ಲಿ (Siddaganga HighSchool) 1994-95 ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಮ್ಮೀಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೂ ಮುನ್ನ ಶಿಕ್ಷಕರನ್ನು ವೀರಗಾಸೆ ಮೊದಲಾದ ಕಲಾತಂಡಗಳೊಂದಿಗೆ ಪೂರ್ಣಕುಂಭ ಕಳಸದೊಂದಿಗೆ ವಿದ್ಯಾರ್ಥಿಗಳು ವೇದಿಕೆಗೆ ಬರಮಾಡಿಕೊಂಡು ಎಲ್ಲ ಶಿಕ್ಷಕರನ್ನು ಸನ್ಮಾನ ಮಾಡುವ ಮೂಲಕ ಗುರು ವಂದನೆ ಮಾಡಲಾಯಿತು.
ಗುರು ವಂದನೆ ಕಾರ್ಯಕ್ರಮದ ನೆನಪಿಗಾಗಿ ಶಾಲಾ ಆವರಣದಲ್ಲಿ ಎಲ್ಲ ಗುರುಗಳಿಂದ ಸಸಿಗಳನ್ನು ನೆಡಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಎಚ್.ಎಸ್.ಬಸವರಾಜ್ ಮಾತನಾಡಿ, ಸಿದ್ದಗಂಗಾ ಪೀಠಾಧ್ಯಕ್ಷರಾಗಿದ್ದ ಶ್ರೀ ಶಿವಕುಮಾರ ಸ್ವಾಮಿಗಳು ಅಂದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಭಾಗದಲ್ಲಿ ಪ್ರೌಢಶಾಲೆಯನ್ನು ತೆರೆದು ಎಲ್ಲರಿಗೂ ಅತ್ಯುತ್ತನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ತಾವು 16 ವರ್ಷಗಳ ಕಾಲ ಈ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ತಮ್ಮ ಕರ್ತವ್ಯದ ಅವಧಿಯಲ್ಲಿ ಅತ್ಯಂತ ಶಿಸ್ತು ಬದ್ಧ ಮುಖ್ಯ ಶಿಕ್ಷಕರಾಗಿ ಶಾಲೆಯನ್ನ ಅತ್ಯುನ್ನತವಾಗಿ ಅಭಿವೃದ್ಧಿಗೊಳಿಸಿದ್ದನ್ನು ಸ್ಮರಿಸಿದರು.
ಪ್ರೌಢಶಾಲೆಗೆ ಸುತ್ತಮುತ್ತಲಿನ ಗ್ರಾಮಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಉತ್ತಮವಾದ ವಿದ್ಯಾಭ್ಯಾಸದ ಜೊತೆಗೆ ಆಚಾರ ವಿಚಾರದೊಂದಿಗೆ ಆದರ್ಶ ಒಳ್ಳೆಯ ಸಂಸ್ಕಾರವಂತ ವಿದ್ಯಾರ್ಥಿಗಳನ್ನು ನಮ್ಮ ಶಾಲೆಯು ರೂಪಿಸುತ್ತಿತ್ತು.
ಸುಮಾರು 30 ವರ್ಷಗಳ ನಂತರ ನೀವೆಲ್ಲರೂ ಸಹ ನಮ್ಮನ್ನ ಗುರುತಿಸಿ ಗುರುವಂದನೆಯನ್ನು ಮಾಡುತ್ತಿರುವುದು ನಮ್ಮೆಲ್ಲರಿಗೂ ಸಂತಸವಾಗಿದೆ. ನೀವೆಲ್ಲರೂ ಈ ಸಮಾಜದ ಉತ್ತಮ ನಾಗರಿಕರಾಗಿ ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿ ನಿಮ್ಮ ತಂದೆ ತಾಯಿಯಂದಿರಿಗೆ ಒಳ್ಳೆಯ ಹೆಸರನ್ನು ತನ್ನಿ ಎಂದು ಶುಭ ಹಾರೈಸಿದರು.
ಶಾಲೆಯ ಹಳೆಯ ವಿದ್ಯಾರ್ಥಿಗಳು ಮಾತನಾಡಿ, ಇಂದು ಸಮಾಜದಲ್ಲಿ ನಮ್ಮ ಈ ಬೆಳವಣಿಗೆಗೆ ಅಂದು ನಮ್ಮ ಗುರುಗಳು ಹೇಳಿಕೊಟ್ಟ ಪಾಠದ ಜೊತೆಗೆ ನೈತಿಕ ಮೌಲ್ಯಗಳು ಆದರ್ಶಗಳು ಕಾರಣವಾಗಿವೆ ಈ ಗುರು ಋಣವನ್ನು ತೀರಿಸುವುದು ಎಂದಿಗೂ ಸಾಧ್ಯವಿಲ್ಲ ಆದರೆ ಈ ಒಂದು ಸಣ್ಣ ಗುರು ವಂದನೆಯ ಮೂಲಕ ಅವರ ಪ್ರೀತಿಗೆ ಪಾತ್ರರಾಗೋಣ ಎಂದರು.
ಎಲ್ಲ ವಿದ್ಯಾರ್ಥಿಗಳು ಅಂದಿನ ತಮ್ಮ ವಿದ್ಯಾರ್ಥಿ ಜೀವನದ ನೆನಪುಗಳನ್ನು ಮೆಲುಕು ಹಾಕುವುದರ ಜೊತೆಗೆ ತಮ್ಮ ವಿದ್ಯಾರ್ಥಿ ಜೀವನದ ತಮ್ಮ ವಿದ್ಯಾರ್ಥಿ ಜೀವನದ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಇದೇ ಸಂದರ್ಭದಲ್ಲಿ ಈಗ ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರುಗಳಾದ ಟಿ.ಎಂ. ವಾಗೀಶ್ ಚಕ್ರೇಶ್ವರ್, ಎಸ್. ರುದ್ರೇಶ್, ಎಂ.ವಿ.ಶಿವರುದ್ರಯ್ಯ, ಎಂ. ಶಿವಣ್ಣ, ಎಚ್.ಪ್ರಭುದೇವ್, ಕೆ.ಬಿ.ಶಿವಶಂಕರಯ್ಯ, ಸಿ.ವಿ. ಬಸವರಾಜು, ಜಿ.ಬಿ.ಶೇಖರ್, ಎಸ್.ಕೆ.ಸಿ.ಶೇಖರ್, ಎಚ್. ಮೃತ್ಯುಂಜಯ ಭಾಗವಹಿಸಿ ವಿದ್ಯಾರ್ಥಿಗಳಿಂದ ಸನ್ಮಾನವನ್ನು ಸ್ವೀಕರಿಸಿದರು.