
ದೊಡ್ಡಬಳ್ಳಾಪುರ: ಡಿ. 21 ರಂದು ನಡೆಯಲಿರುವ ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಗೆ (Bashettihalli Town Panchayat Election) ದಿನಗಣನೆ ಆರಂಭವಾಗಿದೆ.
ಆದರೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಈ ಚುನಾವಣೆಯಲ್ಲಿ ಸ್ವತಂತ್ರವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಬಿಜೆಪಿಗೆ ಸೆಡ್ಡು ಹೊಡೆದಿದೆ.
ಇದರ ಬೆನ್ನಲ್ಲೇ ಇಂದು ಕಾಂಗ್ರೆಸ್ ಜೊತೆ ಜೆಡಿಎಸ್ ಮುಖಂಡರು ದೊಡ್ಡಬಳ್ಳಾಪುರ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿ ಗಮನ ಸೆಳೆದಿದೆ.
ಇನ್ನೂ ಪ್ರತಿಭಟನೆಗೆ ಕಾರಣ ಏನು ಅಂತ ನೋಡುವುದಾದರೆ, ಡಿ.21ರಂದು ನಡೆಯಲಿರುವ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಳಸುವ ಇವಿಎಂ ಯಂತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಚಿನ್ಹೆಗಳನ್ನು ಚಿಕ್ಕದಾಗಿ ಮುದ್ರಿಸಿ, ಬಿಜೆಪಿ ಇತರೆ ಬೇರೆ ಪಕ್ಷದ ಚಿನ್ಹೆ ದೊಡ್ಡದಾಗಿ ಮುದ್ರಿಸಿದ್ದಾರೆ ಎಂಬ ಆರೋಪಕ್ಕೆ ಕಾರಣವಾಗಿದೆ.
ಈ ವಿಷಯ ತಿಳಿದ ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ವಿಶ್ವನಾಥ್ ರೆಡ್ಡಿ, ಅಪ್ಪಿವೆಂಕಟೇಶ್, ಆದಿತ್ಯ ನಾಗೇಶ್, ಲಾವಣ್ಯ ನಾಗರಾಜ್, ರಾಮಾಂಜಿನಪ್ಪ, ಜೆಡಿಎಸ್ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಲಕ್ಷ್ಮೀಪತಯ್ಯ, ದೊಡ್ಡಬಳ್ಳಾಪುರ ತಾಲೂಕು ಜೆಡಿಎಸ್ ವಕ್ತಾರ ಕುಂಟನಹಳ್ಳಿ ಮಂಜುನಾಥ್, ಮುಖಂಡರಾದ ತೂಬಗೆರೆ ಹೋಬಳಿ ಅಧ್ಯಕ್ಷ ಜಗನ್ನಾಥ ಚಾರ್, ಬಾಶೆಟ್ಟಿಹಳ್ಳಿ ಜೆಡಿಎಸ್ ಅಭ್ಯರ್ಥಿಗಳಾದ ವಿಶ್ವನಾಥ್, ನಾಗರಾಜ್, ಮಧನ್, ಶ್ರೀನಿವಾಸ್, ಮುಖಂಡರಾದ ಸೋನು, ರಿಯಾಜ್, ಶ್ರೀನಿವಾಸ್, ಮುನೇಗೌಡ ಮತ್ತಿತರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಚುನಾವಣೆ ಅಧಿಕಾರಿಗಳು ಮನವಿ ಪತ್ರ ಸ್ವೀಕರಿಸಿ, ಲೋಪವಾಗಿದ್ದರೆ ಸರಿಪಡಿಸಿ, ಚುನಾವಣೆ ಆಯೋಗದ ನಿಯಮದಂತೆ ಚಿನ್ಹೆ ಅಳವಡಿಸುವ ಭರವಸೆ ನೀಡಿದರು.