
ಬೆಳಗಾವಿ: ನನ್ನ ಬಗ್ಗೆ ಮಾತನಾಡುವಾಗ ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar) ನಾಲಿಗೆ ಬಿಗಿ ಹಿಡಿದು ಮಾತನಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B.Y. Vijayendra) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಯಾರಿಗೋ ದಬ್ಬಾಳಿಕೆ ಮಾಡಿದಂತೆ ನನಗೆ ಮಾಡೋಕೆ ಬರಬೇಡಿ. ನಾವು ತಪ್ಪಿಸಿಕೊಂಡು ಓಡಾಡುತ್ತಿಲ್ಲ. ವಿಪಕ್ಷದವರ ಪ್ರಶ್ನೆಗಳಿಗೆ ನಿಮಗೆ ತಾಕತ್ತಿದ್ದರೆ ಸದನದಲ್ಲಿ ಉತ್ತರ ಕೂಡಿ.
ಈ ರಾಜ್ಯದ ಇತಿಹಾಸದಲ್ಲಿ ಭ್ರಷ್ಟಾಚಾರದ ಪಿತಾಮಹ ಯಾರು ಎಂದರೆ ಅದು ಡಿ.ಕೆ.ಶಿವಕುಮಾರ್ ಎಂಬುದು ಎಲ್ಲರಿಗೂ ಗೊತ್ತು. ಕಾಂಗ್ರೆಸ್ ನವರನ್ನ ಕೇಳಲಿ.
ನಾನು ಒಂದು ಪಕ್ಷದ ರಾಜ್ಯಾಧ್ಯಕ್ಷ ಹೀಗಿರುವಾಗ ಪಕ್ಷದ ಅಧ್ಯಕ್ಷರ ವಿರುದ್ಧ ಮನಬಂದಂತೆ ಮಾತನಾಡಬೇಡಿ.
ವಿಪಕ್ಷದವರ ಪ್ರಶ್ನೆಗೆ ಉತ್ತರಿಸುವ ತಾಕತ್ತಿದ್ದರ ಸದನದಲ್ಲಿ ಉತ್ತರಿಸಿ ಅದನ್ನು ಬಿಟ್ಟು ದಬ್ಬಾಳಿಕೆ ನಡೆಸುವ ಅಗತ್ಯವಿಲ್ಲ.
ಯಡಿಯೂರಪ್ಪ ಅವರ ಮೇಲೆ ಯಾವ ರೀತಿ ಷಡ್ಯಂತ್ರ ನಡೆಯಿತು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಬಹುದು ಎಂದು ಯಾರು ಯಾರು ಷಡ್ಯಂತ್ರ ಮಾಡಿದ್ದಾರೆ ಎಂಬುದನ್ನು ಬರುವ ದಿನಗಳಲ್ಲಿ ತಿಳಿಸುತ್ತೇನೆ ಎಂದರು.