
ದೊಡ್ಡಬಳ್ಳಾಪುರ: ಮೈ ನಡುಗಿಸುತ್ತಿರುವ ಮಾಗಿ ಚಳಿಯ ನಡುವೆ ತಾಲೂಕಿನಲ್ಲಿ ಅವರೆಕಾಯಿ (AvareKayi) ಸುಗ್ಗಿ, ಸೊಗಡು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ.
ಡಿಸೆಂಬರ್‌ನಿಂದ ಜನವರಿ ಅವಧಿಯಲ್ಲಿ ಬೆಳೆಯಾಗಿ ಬೆಳೆಯುವ ಅವರೆಕಾಯಿಗೆ ಹೆಚ್ಚು ಬೇಡಿಕೆ. ಈ ಋತುವಿನಲ್ಲಿ ಬೆಳೆದ ಅವರೆಗೆ ಸೊಗಡಿನ ಜೊತೆ ರುಚಿಯೂ ಅಧಿಕ.
ಹಿತುಕಿದ ಅವರೆಕಾಳು ಸಾಂಬಾರು ಹಾಗೂ ಮುದ್ದೆ ಊಟ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಪ್ರಸಿದ್ಧಿ. ಇದಲ್ಲದೇ ಉಪ್ಪಿಟ್ಟಿಗೂ ಹೆಚ್ಚು ಬಳಸುತ್ತಾರೆ. ಕೆಲವೆಡೆ ಮಾಂಸ ಆಹಾರಕ್ಕೂ ಅವರೆಕಾಯಿ ಬಳಕೆ ಮಾಡುತ್ತಾರೆ. ಅಲ್ಲದೆ ಸಂಜೆಯ ಕುರುಕಲು ತಿಂಡಿಯಾಗಿಯೂ ಬಳಕೆಯಾಗುತ್ತದೆ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಅವರೇಕಾಯಿಗೆ ಪ್ರಸಿದ್ಧ ಪಡೆದ ಗೌಡಹಳ್ಳಿಯಲ್ಲಿ ಚುಮು ಚುಮು ಚಳಿಯ ನಡುವೆಯೂ ರೈತರು ಅವರೆಕಾಯಿ ಕಟಾವು ಮಾಡುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಏಕಾಏಕಿ ದರ ಕುಸಿತವಾಗಿದ್ದು, 80 ಇದ್ದ ದರ 45 ಕ್ಕೆ ಬಂದಿದೆ.
ಸಾಮಾನ್ಯವಾಗಿ ನಾಟಿ ಅವರೆಗೆ ಬೇಡಿಕೆ ಹೆಚ್ಚಿದ್ದು, ಕೆ.ಜಿಗೆ ರೂ 100 ವರೆಗೆ ಮಾರಾಟವಾಗುತ್ತದೆ. ಸಂಕ್ರಾಂತಿ ಹಬ್ಬ ಹತ್ತಿರ ಬರುತ್ತಿದ್ದಂತೆ ದರ ಕಡಿಮೆ ಆಗಬೇಕಿತ್ತು. ಆದರೆ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದ್ದು, ಏಕಾಏಕಿ ಬೆಲೆ ಕುಸಿತವಾಗಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ಒಂದು ಎಕರೆ ಅವರೆ ಬೆಳೆಯಲು ಉಳುಮೆ, ಎರಡು ಬಾರಿ ಔಷಧಿ ಸಿಂಪಡಣೆ, ಕೂಲಿ ಸೇರಿ ರೂ. 10ರಿಂದ 15 ಸಾವಿರವರೆಗೆ ಖರ್ಚು ಬರುತ್ತದೆ. ಆದರೆ ದರ ಕುಸಿತ ರೈತರಿಗೆ ನಷ್ಟಕ್ಕೆ ಕಾರಣವಾಗುತ್ತಿದ್ದು, ಅವರೆಕಾಯಿಗೂ ಬೆಂಬಲ ಬೆಲೆ ಘೋಷಿಸುವಂತೆ ಯುವ ರೈತ ಗೌಡಹಳ್ಳಿ ಮನು ಒತ್ತಾಯಿಸಿದ್ದಾರೆ.