
ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ (Bashettihalli town panchayat election) ರಚನೆಯಾದ ನಂತರ ಇದೇ ಪ್ರಥಮ ಬಾರಿಗೆ ಇಂದು ನಡೆದ ಮತದಾನದಲ್ಲಿ, ಸಣ್ಣ ಪುಟ್ಟ ಮಾತಿನ ಚಕಮಕಿಗಳ ಹೊರತುಪಡಿಸಿ ಚುನಾವಣೆ ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಶೇ.81.34 ರಷ್ಟು ಮತದಾನ ನಡೆದಿದೆ.
ಕೈಗಾರಿಕಾ ಪ್ರದೇಶವನ್ನು ಹೊಂದಿರುವ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲೂ ಸ್ಥಳಿಯರಷ್ಟೇ ರಾಜ್ಯದ ವಿವಿಧ ಜಿಲ್ಲೆಗಳ ಹಾಗೂ ಹೊರ ರಾಜ್ಯದವರು ಇಲ್ಲಿಗೆ ಬಂದು ನೆಲೆಸಿರುವ ಮತದಾರರ ಸಂಖ್ಯೆಯೂ ಸರಿಸಮನಾಗಿಯೇ ಇದೆ. ಹಾಗಾಗಿ ಸ್ಥಳೀಯರು ಯಾರು ಹೊರಗಿನವರು ಯಾರು ಎನ್ನುವುದೇ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಸೇರಿದಂತೆ ಎಲ್ಲರಿಗೂ ಗೊಂದಲ ಉಂಟುಮಾಡಿತ್ತು.
ಬೇರೊಬ್ಬರ ಹೆಸರಿನಲ್ಲಿ ಮತ.!?
ಬಾಶೆಟ್ಟಿಹಳ್ಳಿ ವಾರ್ಡ್ ನಂಬರ್ 17ರಲ್ಲಿ ಬೇರೆಯವರ ಹೆಸರಿನಲ್ಲಿ ಮತ ಚಲಾಯಿಸಿರುವ ಆರೋಪಗಳು ಕೇಳಿಬಂದವು. ಅಲ್ಲದೆ ಬೇರೊಬ್ಬರ ಹೆಸರಿನಲ್ಲಿ ಮತಚಲಾಯಿಸಲು ಬಂದಿದ್ದ ವ್ಯಕ್ತಿಯನ್ನು ಪಕ್ಷದ ಸ್ಥಳೀಯ ಏಜೆಂಟ್ ಒಬ್ಬರು ಪ್ರಶ್ನಿಸಿ ಪೊಲೀಸರಿಗೆ ಒಪ್ಪಿಸಿದ ಪ್ರಕರಣವು ನಡೆಯಿತು.
ಹೊರಗಿನಿಂದ ಬಂದು ನೆಲೆಸಿರುವವರ ಮತಗಳು ಹೆಚ್ಚು ಇರುವ ವಾರ್ಡ್ ಸಂಖ್ಯೆ 17ರಲ್ಲಿ ಸ್ಥಳೀಯ ನಿವಾಸಿ ದಕ್ಷತ್ ಎಂಬಾತ ಮತಚಲಾಯಿಸಲು ಹೋದಾಗ ಆತನ ಹೆಸರಿನಲ್ಲಿ ಬೇರೊಬ್ಬರ ಮತಚಲಾಯಿಸಿದ್ದರು. ಇದರಿಂದಾಗಿ ದಕ್ಷತ್ ಮತದಾನದಿಂದ ವಂಚಿತನಾಗಿರುವ ಬಗ್ಗೆ ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡು, ಮತದಾರರ ಪಟ್ಟಿ ಪರಿಷ್ಕರ ಸರಿಯಾಗಿ ನಡೆಯಬೇಕು ಎಂದು ಆಗ್ರಹಿಸಿದ.
ಬಿಜೆಪಿಗೆ ತಟ್ಟುತ್ತಾ ಬಂಡಾಯದ ಬಿಸಿ..?!
ಅಧಿಕೃತವಾಗಿ ನಾಲ್ಕು ವಾರ್ಡ್ಗಳು ಸೇರಿದಂತೆ ಹಲವಾರು ಕಡೆಗಳಲ್ಲಿ ಬಿಜೆಪಿಯಲ್ಲೇ ಇರುವವರು ಬಂಡಾಯವಾಗಿ ಸ್ಪರ್ಧಿಸಿದ್ದರಿಂದ ಬಿಜೆಪಿ ಅಧಿಕೃತ ಅಭ್ಯರ್ಥಿಗಳು ಮತಯಾಚನೆ ಸೇರಿದಂತೆ ಮತದಾರರನ್ನು ತಮ್ಮತ್ತ ‘ಒಲಿಸಿಕೊಳ್ಳಲು’ ಹೆಣಗಾಡುವಂತಾಗಿತ್ತು.
ಬಿ.ಸಿ. ಆನಂದ್ ಕುಮಾರ್ ಹಿಡಿತ, ಬಿಜೆಪಿಗೆ ತಳಮಳ
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಡಿತ ಹೊಂದಿರುವ ಬಮೂಲ್ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಬಿ.ಸಿ.ಆನಂದಕುಮಾರ್ ಅವರು ಹತ್ತಿರದ ಸಂಬಂಧಿ ಮತ್ತು ಇವರ ಆಪ್ತರು ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರು.

ಇವರ ಪರವಾಗಿ ಬಿ.ಸಿ.ಆನಂದಕುಮಾರ್ ಬಹಿರಂಗವಾಗಿಯೇ ಪ್ರಚಾರ ಮತ್ತು ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಿರುವುದಾಗಿಯೂ ಹೇಳಿದ್ದರು. ಇದರಿಂದಾಗಿ ಬಿಜೆಪಿ ಚಿಹ್ನೆಯ ಮೇಲೆ ಅಧಿಕೃತವಾಗಿ ಸ್ಪರ್ಧಿಸಿದ್ದವರು ಹೆಚ್ಚಿನ ಶ್ರಮವಹಿಸಿ ಕೊನೆಯ ಕ್ಷಣದಲ್ಲೂ ಮತಯಾನೆ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು.
ಉಳಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಬಂಡಾಯದ ಬಿಸಿ ಇರಲಿಲ್ಲ.
4 ವರ್ಷಗಳ ಬಳಿಕ ಚುನಾವಣೆ
ಗ್ರಾಮ ಪಂಚಾಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿದ ನಾಲ್ಕು ವರ್ಷಗಳ ನಂತರ ಚುನಾವಣೆ ನಡೆದಿದ್ದರಿಂದ ಎಲ್ಲಾ ವಯೋಮಾನದ ಮತದಾರರು ಉತ್ಸಾಹದಿಂದಲೇ ಮತಗಟ್ಟೆಗಳ ಕಡೆಗೆ ಬಂದು ಮತಚಲಾಯಿಸುತ್ತಿದ್ದ ದೃಶ್ಯ ಕಂಡು ಬಂತು.
ಎಳ್ಳುಪುರ ವಾರ್ಡ್ನ ಮತಗಟ್ಟೆ 90 ವರ್ಷದ ಶಾರದಬಾಯಿ ಅವರು ವೀಲ್ ಚೇರ್ ನಲ್ಲಿ ಬಂದು ಮತಚಲಾಯಿಸಿದರು.
ರಾಜ್ಯ ಚುನಾವಣೆ ಆಯುಕ್ತರ ಭೇಟಿ
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಭಾನುವಾರ ನಡೆದ ಸಾರ್ವತ್ರಿಕಾ ಚುನಾವಣೆಯ ಮತಗಟ್ಟೆಗಳಿಗೆ ರಾಜ್ಯ ಚುನಾವಣ ಆಯುಕ್ತ ಜಿ.ಎಸ್.ಸಂಗ್ರೇಶಿ ಅವರು ಭೇಟಿ ನೀಡಿ ಮತದಾನದ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಉಪವಿಭಾಗಾಧಿಕಾರಿ ಎನ್.ದುರ್ಗಾಶ್ರೀ, ಚುನಾವಣ ವೀಕ್ಷಕ ಶಿವಕುಮಾರ್, ತಹಶೀಲ್ದಾರ್ ಡಾ.ಮಲ್ಲಪ್ಪ ಕೆ.ಯರಗೋಳ ಇದ್ದರು.