
ಶಿರಸಿ: ರಾಜ್ಯದ ಅತ್ಯಂತ ದೊಡ್ಡ ಜನಪದ ಜಾತ್ರೆಗಳಲ್ಲಿ ಒಂದಾದ ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ (Marikamba Devi) ಜಾತ್ರಾ ಮಹೋತ್ಸವವು ಫೆಬ್ರವರಿ 24 ರಿಂದ ಆರಂಭವಾಗಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.
ಭಾನುವಾರ ದೇವಾಲಯದ ಆವರಣದಲ್ಲಿ ನಡೆದ ಸಾರ್ವಜನಿಕರ ಹಾಗೂ ಜನಪ್ರತಿ ನಿಧಿಗಳ ಸಭೆಯಲ್ಲಿ ಜಾತ್ರೆಯ ವಿವಿಧ ವಿಧಿವಿಧಾನಗಳ ದಿನಾಂಕವನ್ನು ಪ್ರಕಟಿಸಲಾಯಿತು.
ಜ.7ರಂದು ದೇವಿಯ ಪ್ರತಿಷ್ಠಾ ಮಂಟಪ ಕಳಚು ವುದು, ಫೆ.3ರಂದು ಪೂರ್ವದಿಕ್ಕಿಗೆ ಮೊದಲ ಹೊರ ಬೀಡು, ಫೆ.6ರಂದು ಉತ್ತರ ದಿಕ್ಕಿಗೆ 2ನೇ ಹೊರಬೀಡು, ಫೆ.10ರಂದು ಪೂರ್ವ ದಿಕ್ಕಿಗೆ 3ನೇ ಹೊರಬೀಡು, ಫೆ.13ರಂದು ರಥ ಕಟ್ಟಲು ಮರ ಕಡಿಯಲು ಹೋಗುವುದು, ಫೆ.13ರಂದು ಉತ್ತರ ದಿಕ್ಕಿಗೆ 4ನೇ ಹೊರಬೀಡು, ಫೆ.17ರಂದು ರಥದ ಮರ ತರುವುದು, ಅದೇ ದಿನ ರಾತ್ರಿ ಪೂರ್ವದಿಕ್ಕಿಗೆ ಅಂಕೆಯ ಹೊರಬೀಡು ನಡೆಯಲಿದೆ.
ಫೆ.18ರಂದು ಅಂಕೆ ಹಾಕುವುದು, ದೇವಿಯ ವಿಸರ್ಜನೆ ನಡೆಯಲಿದೆ. ಫೆ.24ರಂದು ಮಧ್ಯಾಹ್ನ 12.30 ಗಂಟೆಯಿಂದ 1.08 ಗಂಟೆಯೊಳಗೆ ದೇವಿಯ ರಥದ ಕಲಶದ ಪ್ರತಿಷ್ಠೆ ಹಾಗೂ ಸಭಾ ಮಂಟಪದಲ್ಲಿ ರಾತ್ರಿ 11.36ರಿಂದ 11.43 ಗಂಟೆಯೊಳಗೆ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ನಡೆಯಲಿದೆ.
ಫೆ.25ರಂದು ಬೆಳಗ್ಗೆ 7.27 ಗಂಟೆಯಿಂದ 7.45 ಗಂಟೆಯೊಳಗೆ ದೇವಿಯ ರಥಾರೋಹಣ ಕಾರ್ಯ ನಡೆಯಲಿದ್ದು, ನಂತರ 9.07ರ ನಂತರ ದೇವಿಯ ಶೋಭಾ ಯಾತ್ರೆ, ನಂತರ ಗದ್ದುಗೆಯ ಮೇಲೆ ಸ್ಥಾಪನೆ ಕಾರ್ಯ ಜರುಗುವುದು.
ಫೆ.26ರಿಂದ ಭಕ್ತಾದಿಗಳ ಸೇವೆಗೆ ಅವಕಾಶವಿದೆ. ಮಾ.4ರಂದು ಬೆಳಗ್ಗೆ 10.47 ಗಂಟೆಗೆ ಜಾತ್ರೆ ಮುಕ್ತಾಯವಾಗಲಿದೆ. ಮಾ.19ರ ಯುಗಾದಿಯಂದು ದೇವಿಯ ಪುನರ್ ಪ್ರತಿಷ್ಠೆ ನಡೆಯಲಿದೆ.