
ಉತ್ತರಪ್ರದೇಶ: ಬೀದಿ ನಾಯಿಗಳ (Street Dog) ಉಪಟಳದ ವರದಿಗಳು ವ್ಯಾಪಕವಾಗಿದೆ. ಮತ್ತೊಂದೆಡೆ ಬೇಜವಬ್ದಾರಿಯಿಂದ ಸಾಕಿದ ಕೆಲವರು ನಾಯಿಗಳನ್ನು ರಸ್ತೆ ಬಿಡುವವರಿಂದ ರಸ್ತೆಯಲ್ಲಿ ಓಡಾಡುವವರು ನಾಯಿಗಳ ದಾಳಿಗೆ ಒಳಗಾಗುತ್ತಿದ್ದಾರೆ.
ಈ ಘಟನೆ ಬೆನ್ನಲ್ಲೇ ಬೀದಿ ನಾಯಿ ಕಚ್ಚಿದ ಕೇವಲ 5 ಗಂಟೆಗಳಲ್ಲಿ ಉತ್ತರ ಪ್ರದೇಶದ 23 ವರ್ಷದ ಯುವಕನಿಗೆ ರೇಬೀಸ್ ರೋಗದ ಲಕ್ಷಣಗಳು ಕಂಡು ಬಂದಿದ್ದು, ಆತ ನಾಯಿಯಂತೆ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಮ್‌ಕುಮಾರ್ ಅಲಿಯಾಸ್ ರಾಮು (23 ವರ್ಷ) ಎಂಬ ಯುವಕ ಡಿಸೆಂಬರ್ 20ರಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೀದಿ ನಾಯಿಯೊಂದು ಆತನ ಕಾಲಿಗೆ ಕಚ್ಚಿದೆ. ಗಾಯ ಹೆಚ್ಚು ಗಂಭೀರವಾಗಿಲ್ಲ ಎಂದು ಭಾವಿಸಿದ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ಯದೆ ಮನೆಯಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಆದರೆ ಅಲ್ಲಿಂದ ಆತನ ಸ್ಥಿತಿ ಹದಗೆಡಲು ಶುರುವಾಗಿದೆ.
ಬಳಿಕ ಆತನಲ್ಲಿ ಮೊದಲಿಗೆ ಜ್ವರ, ಅಸ್ವಸ್ಥತೆ ಕಾಣಿಸಿಕೊಂಡಿದ್ದು, ಬಳಿಕ ಆತನ ವರ್ತನೆ ಸಂಪೂರ್ಣವಾಗಿ ಬದಲಾಗಿದೆ. ಏಕಾಏಕಿ ನಾಯಿಯಂತೆ ಶಬ್ದ ಮಾಡುವುದು, ಕೂಗುವುದು, ಎದುರಿಗೆ ಬಂದವರ ಮೇಲೆ ಎರಗಲು ಪ್ರಯತ್ನಿಸುವುದು, ಕಚ್ಚಲು ಯತ್ನಿಸುವಂತಹ ಭೀಕರ ಲಕ್ಷಣಗಳು ಕಾಣಿಸಿಕೊಂಡಿವೆ.
ರಾಮು ಸ್ಥಿತಿಯನ್ನು ಕಂಡ ಗ್ರಾಮಸ್ಥರು, ಕೊನೆಗೆ ಆತನನ್ನು ಮಂಚಕ್ಕೆ ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ಈ ಮನಕಲಕುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಏಮ್ಸ್ ಗೆ ದಾಖಲು
ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡ ಕುಟುಂಬಸ್ಥರು ತಕ್ಷಣ ಆತನನ್ನು ಖೈರ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.
ಯುವಕನ ಸ್ಥಿತಿಯನ್ನು ಗಮನಿಸಿದ ವೈದ್ಯರು ಇದು ರೇಬೀಸ್‌ನ ತೀವ್ರ ಲಕ್ಷಣಗಳೆಂದು ಶಂಕಿಸಿ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ (AIIMS) ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ.
ಸದ್ಯ ಯುವಕನ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ನಾಯಿ ಕಚ್ಚಿದ ತಕ್ಷಣ ವೈದ್ಯಕೀಯ ಚಿಕಿತ್ಸೆ ಮತ್ತು ಲಸಿಕೆ ಪಡೆಯುವುದು ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾರಿ ಹೇಳಿದೆ. ಸಣ್ಣ ಗಾಯವೆಂದು ನಿರ್ಲಕ್ಷಿಸುವುದು ಪ್ರಾಣಕ್ಕೆ ಕುತ್ತು ತರಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.