
ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ, ವಿಧಾನಸಭೆಗಷ್ಟೇ ಬಿಜೆಪಿ (BJP), ಜೆಡಿಎಸ್ (JDS) ಮೈತ್ರಿ ಆಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ ಎಂದು ಮಾಜಿ ಪ್ರಧಾನಿಗಳು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡ (H.D. Deve Gowda) ಅವರು ಘೋಷಿಸಿದ್ದಾರೆ. ಈ ಮೂಲಕ ಜೆಡಿಎಸ್ ಪಕ್ಷದವರನ್ನೇ ಆಪರೇಷನ್ ಕಮಲ ಮಾಡುತ್ತಿದ್ದ ಬಿಜೆಪಿ ನಾಯಕರಿಗೆ ತೀಕ್ಷ್ಣ ಸಂದೇಶ ನೀಡಿದ್ದಾರೆ.
ಪಕ್ಷದ ರಾಜ್ಯ ಕಚೇರಿಗೆ ಶುಕ್ರವಾರ ಬೆಳಗ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಅವರು ಮಾತನಾಡಿದರು.
ಲೋಕಸಭೆ ಚುನಾವಣೆಯಲ್ಲಿ ಉತ್ತಮ ಮೈತ್ರಿ ಆಗಿದೆ. ಅದು ವಿಧಾನಸಭೆ ಚುನಾವಣೆಯಲ್ಲಿ ಕೂಡ ಮುಂದುವರಿಯುತ್ತದೆ. ಆದರೆ ಪಕ್ಷ ಕಟ್ಟುವ ದೃಷ್ಟಿಯಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಹಳ ಮುಖ್ಯ. ಸ್ಥಳೀಯ ಚುನಾವಣೆಯ ಸೀಟು ಹಂಚಿಕೆ ಬಗ್ಗೆ ನರೇಂದ್ರ ಮೋದಿ ಅವರು, ಅಮಿತ್ ಶಾ ಅವರೊಂದಿಗೆ ಚರ್ಚೆ ನಡೆಸಲು ಆಗುತ್ತದೆಯೇ? ಎಂದು ಮಾಜಿ ಪ್ರಧಾನಿಗಳು ಹೇಳಿದರು.
ಜೆಡಿಎಸ್ ಮತ್ತು ಬಿಜೆಪಿ ನಡುವೆ ಸಂಬಂಧ ಚೆನ್ನಾಗಿದೆ. ನರೇಂದ್ರ ಮೋದಿ ಅವರು ಹಾಗೂ ಅಮಿತ್ ಶಾ ಅವರೊಂದಿಗೆ ನಮ್ಮ ಬಾಂಧವ್ಯ ಉತ್ತಮವಾಗಿದೆ. ನಮ್ಮ ಶಕ್ತಿ ಎಲ್ಲೆಲ್ಲಿ ಇದೆಯೋ ಅಲೆಲ್ಲಾ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ನಗರ ಪಾಲಿಕೆಗಳಲ್ಲಿ ನಾವು ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತೇವೆ. ಈ ಸಂಬಂಧ ರಾಜ್ಯ ಬಿಜೆಪಿ ಅಧ್ಯಕ್ಷರು ನೀಡಿರುವ ಹೇಳಿಕೆ ತಪ್ಪು ಎಂದು ನಾನು ಹೇಳಲಾರೆ ಎಂದರು ದೇವೇಗೌಡರು.
ಪಕ್ಷದ ಸಂಘಟನೆಯ ಬಗ್ಗೆ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ಜತೆ ಮಾತನಾಡಿದ್ದೇನೆ. ಹಾಸನದಲ್ಲಿ ಜನವರಿ 23ರಂದು, ಬೆಂಗಳೂರಿನಲ್ಲಿ ಜನವರಿ 18ರಂದು ಸಭೆಗಳನ್ನು ಮಾಡುತ್ತಿದ್ದೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾವು ಪ್ರತ್ಯೇಕವಾಗಿ ಹೋರಾಟ ಮಾಡುತ್ತೇವೆ.
ಮುಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ನಾವು ಎನ್‌ಡಿಎ ಮೈತ್ರಿಕೂಟದಲ್ಲಿಯೇ ಇರುತ್ತೇವೆ. ಹಾಗೆಯೇ; ವಿಧಾನ ಪರಿಷತ್ 4 ಸ್ಥಾನಗಳ ಚುನಾವಣೆಯಲ್ಲಿ ಒಂದು ಸ್ಥಾನ ಜೆಡಿಎಸ್‌ಗೆ ಮತ್ತು 3 ಸ್ಥಾನ ಬಿಜೆಪಿಗೆ ಹಂಚಿಕೆಯಾಗುವ ಬಗ್ಗೆ ಪ್ರಾಥಮಿಕ ಮಟ್ಟದಲ್ಲಿ ಚರ್ಚೆ ಆಗಿದೆ ಎಂದು ಮಾಜಿ ಪ್ರಧಾನಿಗಳು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬೆಂಗಳೂರು ನಗರದಲ್ಲಿಯೂ ಪಕ್ಷ ಸಂಘಟನೆ ಮಾಡುವ ಬಗ್ಗೆ ಕೆಲಸ ಮಾಡುತ್ತಿದ್ದೇವೆ. ಸುಮ್ಮನೆ ಕೂರುವುದು ನನಗೆ ಇಷ್ಟವಿಲ್ಲ. ಹೀಗಾಗಿ ಪಕ್ಷ ಕಟ್ಟುವ ಕೆಲಸದಲ್ಲಿ ನಾನು ತೊಡಗಿದ್ದೇನೆ. ಎಲ್ಲಿಗೆ ಕರೆದರೂ ಹೋಗುತ್ತೇನೆ ಎಂದು ಮಾಜಿ ಪ್ರಧಾನಿಗಳು ಹೇಳಿದರು.
ಅಭಿವೃದ್ಧಿಗೆ ಅಸಹಕಾರಕ್ಕೆ ಬೇಸರ
ಕೇಂದ್ರ ಸಚಿವ ಕುಮಾರಸ್ವಾಮಿ ಅವರು ರಾಜ್ಯಕ್ಕೆ ಒಳ್ಳೆಯದು ಮಾಡಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಹಕಾರ ನೀಡುತ್ತಿಲ್ಲ. ಹೆಚ್.ಎಂ.ಟಿ ಕಾರ್ಖಾನೆ ಪುನಶ್ಚೇತನಕ್ಕೆ ಅವರು ಶ್ರಮಿಸುತ್ತಿದ್ದಾರೆ. ಅದಕ್ಕೆ ರಾಜ್ಯ ಸರ್ಕಾರ ಅಡ್ಡಗಾಲು ಹಾಕುತ್ತಿದೆ. ಹಿಂದೆ ನೀಡಲಾಗಿರುವ ಭೂಮಿಯನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಈ ಸರಕಾರ ಅಡ್ಡಿ ಮಾಡುತ್ತಿದೆ ಎಂದು ಮಾಜಿ ಪ್ರಧಾನಿಗಳು ಬೇಸರ ವ್ಯಕ್ತಪಡಿಸಿದರು.
ಹಾಗೆಯೇ ಭದ್ರಾವತಿಯಲ್ಲಿ ಮೈಸೂರು ಮಹಾರಾಜರು, ಸರ್ ಎಂ ವಿಶ್ವೇಶ್ವರಯ್ಯ ಅವರು ಕಟ್ಟಿದ ಉಕ್ಕು ಕಾರ್ಖಾನೆಯನ್ನು ಉಳಿಸಿಕೊಳ್ಳಲು ಕುಮಾರಸ್ವಾಮಿ ಅವರು ಕಷ್ಟಪಡುತ್ತಿದ್ದಾರೆ. ಅದನ್ನು ಪುನಶ್ಚೇತನ ಮಾಡಬೇಕಾದರೆ ಕಬ್ಬಿಣದ ಅದಿರು ಬೇಕಾಗುತ್ತದೆ. ಅದಕ್ಕೂ ರಾಜ್ಯ ಸರ್ಕಾರ ಸಹಕಾರ ಕೊಡುತ್ತಿಲ್ಲ. ಹೀಗಾದರೆ ಹೇಗೆ ರಾಜ್ಯ ಅಭಿವೃದ್ಧಿ ಆಗುತ್ತದೆ ಎಂದು ದೂರಿದರು ಅವರು.