ದೊಡ್ಡಬಳ್ಳಾಪುರ: ನಗರದ ಪ್ರತಿಷ್ಠಿತ ಶಾಲೆಗಳಾದ ನಳಂದ ಪ್ರೌಢಶಾಲೆ ಮತ್ತು ಲಿಟ್ಲ್ ಏಂಜೆಲ್ಸ್ ಅನಂತ ಶಾಲೆಗಳಲ್ಲಿ (Nalanda High School and Little Angels Anantha Schools) 77ನೇ ಗಣರಾಜ್ಯೋತ್ಸವವನ್ನು (Republic Day) ಸಂಭ್ರಮದಿಂದ ಆಚರಿಸಲಾಯಿತು.
ಈ ವರ್ಷದ ಗಣರಾಜ್ಯೋತ್ಸವದ ಮುಖ್ಯ ಉದ್ದೇಶವಾದ ವಂದೇ ಮಾತರಂ -150 ವರ್ಷಗಳ ಕುರಿತಂತೆ ಸಮೂಹ ಗಾಯನ ಮತ್ತು ಸಾಮೂಹಿಕ ನೃತ್ಯವನ್ನು ಏರ್ಪಡಿಸಲಾಗಿತ್ತು.

ತ್ರಿವರ್ಣ ಧ್ವಜದ ಬೃಹತ್ ಪ್ರತಿ ಕೃತಿಯನ್ನು ಪ್ರದರ್ಶಿಸಲಾಯಿತು.

ಹತ್ತನೇ ತರಗತಿ ವಿದ್ಯಾರ್ಥಿನಿಯರು ವೃದ್ಧಾಶ್ರಮದ ಕುರಿತಾಗಿ ಕಿರು ನಾಟಕವನ್ನು ಮನಮುಟ್ಟುವಂತೆ ಪ್ರದರ್ಶಿಸಿದರು. ಕಿರು ನಾಟಕವನ್ನು ನೋಡಿದ ಪ್ರೇಕ್ಷಕರು ಮೂಕರಾಗಿ ಕಂಬನಿ ಮಿಡಿದರು.

ಇದೇ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಾಲಾ ಕಾರ್ಯದರ್ಶಿ ಅನುರಾಧ ಕೆ ಆರ್ ಅವರು, ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ವಂದೇ ಮಾತರಂ ಗೀತೆಯು ಅತ್ಯಂತ ಪವಿತ್ರವಾದ ರಾಷ್ಟ್ರೀಯ ಗೀತೆಯಾಗಿದ್ದು ಸ್ವಾತಂತ್ರ ಹೋರಾಟದ ಸಮಯದಲ್ಲಿ ದೇಶಭಕ್ತಿಯ ಕಿಚ್ಚು ಹೊತ್ತಿಸಿ ಇಡೀ ದೇಶದ ಜನರನ್ನು ಒಂದುಗೂಡಿಸಿತ್ತು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿ ಗೀತೆಯಾಗಿ ಇಡೀ ದೇಶದ ಜನರು ಜಾತಿ ಧರ್ಮಗಳನ್ನು ಮೀರಿ ಒಂದಾಗಿ ಬ್ರಿಟಿಷರ ವಿರುದ್ಧ ಹೋರಾಡಲು ಸ್ಪೂರ್ತಿಯಾಗಿತ್ತು ಎಂದರು. ವಿದ್ಯಾರ್ಥಿಗಳಿಗೆ ಸೈನ್ಯದ ಮಹತ್ವ, ವಿದ್ಯಾರ್ಥಿ ಜೀವನದಲ್ಲಿ ವಿದ್ಯೆಯ ಪ್ರಾಮುಖ್ಯತೆ ಯ ಕುರಿತಾಗಿ ತಿಳಿಸಿಕೊಟ್ಟರು.

ಶಾಲೆಯ ನೂರಾರು ವಿದ್ಯಾರ್ಥಿಗಳು ರಾಷ್ಟ್ರ ನಾಯಕರ, ಸ್ವಾತಂತ್ರ್ಯ ಹೋರಾಟಗಾರರ ವಿವಿಧ ವೇಷ ಭೂಷಣಗಳನ್ನು ಹಾಗೂ ಸೇನಾ ಸಮವಸ್ತ್ರವನ್ನು ಧರಿಸಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ತಂದರು.

ವಿದ್ಯಾರ್ಥಿಗಳ ಭಾರತ್ ಮಾತಾ ಕಿ ಜೈ ಮತ್ತು ವಂದೇ ಮಾತರಂ ಘೋಷಣೆಗಳು ಮುಗಿಲು ಮುಟ್ಟುವಂತಿತ್ತು.

ಸಮಾರಂಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಅನಿತಾ ಕೆ ಪಿ, ಸುನಿತಾ ಪಿ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ಸಮೂಹವು ನೆರೆದಿತ್ತು.

ಈ ಬಾರಿ ವಿದ್ಯಾರ್ಥಿಗಳೇ ತಯಾರಿಸಿದ್ದ ಫ್ಲೈಯಿಂಗ್ ಡಾಲ್ ವಿಶೇಷ ಆಕರ್ಷಣೆಯಾಗಿತ್ತು