ದೊಡ್ಡಬಳ್ಳಾಪುರ: ತಾಲೂಕಿನ ಪ್ರತಿಷ್ಠಿತ ಶಾಲೆಯಾದ ಎಂಎಸ್‌ವಿ ಪಬ್ಲಿಕ್ ಶಾಲೆಯಲ್ಲಿ (MSV Public School) 2025-26 ಸಾಲಿನ ಪೂರ್ವ ಪ್ರಾಥಮಿಕ ಶಾಲಾ ವಿಭಾಗದ ಮಕ್ಕಳಿಗೆ ಪದವಿ ಪ್ರದಾನ (Convocation) ಸಮಾರಂಭವನ್ನು ಆಯೋಜಿಸಲಾಗಿತ್ತು.

ಸ್ನಾತಕೋತ್ತರ ಪದವಿ ಸಂದರ್ಭದಲ್ಲಿ ಪುಟಾಣಿ ಮಕ್ಕಳು ಗ್ರಾಜುಯೇಶನ್ ಡೇ ಉಡುಗೆಯಲ್ಲಿ ಮಿಂಚುತ್ತಾ ಪದವಿ ಪ್ರಮಾಣ ಪಡೆದು ಸಂಭ್ರಮಿಸಿದರು.
ಮುದ್ದು ಪುಟಾಣಿಗಳ ಈ ಪದವಿ ಪ್ರದಾನ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಡಾ. ವೆಂಕಟೇಶ್ ಪ್ರಸಾದ್ ಜಿ.ಆರ್ ಅವರು ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಅವರು, “ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಥಮ ಮೈಲುಗಲ್ಲಾದ ಪೂರ್ವ ಪ್ರಾಥಮಿಕವನ್ನು ಮುಗಿಸಿ, ತಮ್ಮೆಲ್ಲಾ ಭರವಸೆಗಳೊಂದಿಗೆ ತಮ್ಮ ಭವಿಷ್ಯದೆಡೆಗೆ ಪ್ರಥಮ ಹೆಜ್ಜೆ ಇಡುತ್ತಿರುವ ಪುಟಾಣಿ ಮಕ್ಕಳಿಗೆ ಇಂದು ಸಂತಸದ ದಿನ. ಇದೇ ರೀತಿ ಮುಂದೆಯೂ ಸಹ ಯಶಸ್ವಿಯಾಗಿ ಈ ಮಕ್ಕಳ ಪಯಣ ಸಾಗಲಿ. ಶೈಕ್ಷಣಿಕವಾಗಿ ಮಕ್ಕಳು ಸಶಕ್ತರಾದಾಗ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಎಂಬ ಗಾದೆಮಾತಿನಂತೆ ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ಉತ್ತಮ ಸಂಸ್ಕಾರ ವಿದ್ಯೆ ನೀಡಬೇಕು. ಈ ನಿಟ್ಟಿನಲ್ಲಿ ಶಾಲೆಯು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ.” ಎಂದು ತಿಳಿಸಿದರು.

ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಮಕ್ಕಳು ತಮ್ಮ ಅನುಭವಗಳನ್ನು ಮುದ್ದಾದ ಮಾತುಗಳಿಂದ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷ ಎ. ಸುಬ್ರಮಣ್ಯ, ಕಾರ್ಯದರ್ಶಿ ಮಂಜುಳಾ ಸುಬ್ರಮಣ್ಯ, ಉಪಾಧ್ಯಕ್ಷ ಸ್ವರೂಪ್ ಎಸ್, ಪ್ರಾಂಶುಪಾಲರಾದ ರೆಮ್ಯ.ಬಿ.ವಿ., ಹಾಗೂ ಶಿಕ್ಷಕ ವೃಂದ ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
