ದೊಡ್ಡಬಳ್ಳಾಪುರ: ಇರಾನ್ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ (Ayatollah Ali Khamenei) ಹತ್ಯೆ ಖಂಡಿಸಿ ನಗರದ ಕೋಟೆ ರಸ್ತೆಯಲ್ಲಿನ ಶಿಯಾ ಮುಸ್ಲಿಂ ಸಮುದಾಯದ ಮಸೀದಿಯಿಂದ ಸಿದ್ದಲಿಂಗಯ್ಯ ವೃತ್ತದವರೆಗೆ ಭಾನುವಾರ ಸಂಜೆ ಮೊಂಬತ್ತಿ ಹಿಡಿದು ಮೆರವಣಿಗೆ ನಡೆಸಿದರು.
ಅಯಾತೊಲ್ಲಾ ಅಲಿ ಖಮೇನಿ ಅವರ ಹತ್ಯೆ ಖಂಡಿಸಿದ ಬರಹ, ಪೋಟೋಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಅಮೆರಿಕಾ,ಇಸ್ರೇಲ್ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೆರವಣಿಗೆಯಲ್ಲಿ ಮಕ್ಕಳು ಸೇರಿದಂತೆ ವಯೋವೃದ್ಧರವರೆಗೂ ನೂರಾರು ಜನ ಭಾಗವಹಿಸಿದ್ದರು.
ಕೋಟೆ ಮಸೀದಿ ವತಿಯಿಂದ ಪ್ರತಿ ವರ್ಷ ನಡೆಯುವ ಮೊಹರಂ ಹಬ್ಬಕ್ಕೆ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಿಂದ ಸಾವಿರಾರು ಜನ ಶಿಯಾ ಮುಸ್ಲಿಮರು ಕಾಲ್ನಡಿಗೆಯಲ್ಲಿ ಆಗಮಿಸಿ ಸಂಜೆ ನಡೆಯುವ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ.