ಚಿಕ್ಕಬಳ್ಳಾಪುರ: ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಜನರ ನಡುವೆ ಕೆಲಸ ಮಾಡುವ ಆರೋಗ್ಯಾಧಿಕಾರಿಗಳು, ಆಶಾ, ಆರೋಗ್ಯ ಹಾಗೂ ಅಂಗನವಾಡಿ ಕಾರ್ಯಕರ್ತರ ಪಾತ್ರ ಮಹತ್ವದ್ದಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧಿಶರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲಕ್ಷ್ಮಿಕಾಂತ್ ಮಿಸ್ಕಿನ್ ಅವರು ಅಭಿಪ್ರಾಯಪಟ್ಟರು.
ಅವರು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಇಂದಿನಿಂದ ಸೆಪ್ಟೆಂಬರ್ 7 ರವರೆಗೆ ನಡೆಯಲಿರುವ ರಾಷ್ಟ್ರೀಯ ಪೌಷ್ಟಿಕ ಸಪ್ತಾಹದ ಅಂಗವಾಗಿ ನಡೆದ ಪ್ರಧಾನಮಂತ್ರಿ ಮಾತೃ ವಂದನಾ ಸಪ್ತಾಹ ಹಾಗೂ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಭಾಗದಲ್ಲಿ ರೈತರು ಹಾಲು,ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಆದರೆ, ಅವರು ಅದನ್ನು ಸ್ವಂತಕ್ಕೆ ಬಳಸುವುದು ತೀರಾ ಕಡಿಮೆ. ಆದ್ದರಿಂದ ಪೌಷ್ಟಿಕತೆಯನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ರೈತರು ಮತ್ತು ಅವರ ಕುಟುಂಬದ ಸದಸ್ಯರು ತಾವು ಉತ್ಪಾದಿಸುವ ಹಾಲು, ಹಣ್ಣು, ತರಕಾರಿಗಳನ್ನು ಸ್ವಂತಕ್ಕೂ ಸ್ವಲ್ಪ ಭಾಗವನ್ನು ಬಳಸಬೇಕು. ಕೇವಲ ವ್ಯಾಪಾರಿ ದೃಷ್ಟಿಯಿಂದ ನೋಡದೆ ಮುಖ್ಯವಾಗಿ ತಾಯಿ ಮತ್ತು ಮಕ್ಕಳ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡಬೇಕು. ಪೌಷ್ಟಿಕ ಆಹಾರದ ಮಹತ್ವ ಮತ್ತು ಆರೋಗ್ಯ ರಕ್ಷಣೆಯ ಕುರಿತು ಅಂಗನವಾಡಿ, ಆಶಾ ಹಾಗೂ ಆರೋಗ್ಯ ಕಾರ್ಯಕರ್ತರು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ವೈದ್ಯರು, ಆರೋಗ್ಯ ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳು ಅಪೌಷ್ಟಿಕತೆ ನಿವಾರಣೆ ಮಾಡಲು ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಸ್ಪತ್ರೆಯ ಮಕ್ಕಳ ತಜ್ಞ ಡಾ.ರವಿಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಅಪೌಷ್ಟಿಕತೆ ನಿವಾರಣೆಯ ಕಾರ್ಯಕ್ರಮವನ್ನು ಹಳ್ಳಿ ಹಳ್ಳಿಗಳಿಗೆ ತಲುಪಿಸಬೇಕಿದೆ. ಗರ್ಭಿಣಿಯರು, ಬಾಣಂತಿಯರು, ಹದಿಹರೆಯದವರಿಗೆ ಪೌಷ್ಟಿಕ ಆಹಾರ ಸೇವನೆ, ನೈರ್ಮಲ್ಯ, ವೈಯಕ್ತಿಕ ಶುಚಿತ್ವ, ಶೌಚಾಲಯ ಬಳಕೆ ಬಗ್ಗೆ ತಿಳುವಳಿಕೆ ನೀಡಬೇಕು. ಶಾಲೆಗಳಲ್ಲಿ ಮಕ್ಕಳು ಯಾವ ರೀತಿ ಕೈಗಳನ್ನು ತೊಳೆದುಕೊಂಡು ಶುಚಿತ್ವಕ್ಕೆ ಒತ್ತು ನೀಡಬೇಕು. ಗರ್ಭಿಣಿ ಮಹಿಳೆಯರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿವಹಿಸಬೇಕಾಗುತ್ತದೆ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಕಬ್ಬಿಣಾಂಶವುಳ್ಳ ಮಾತ್ರೆಗಳನ್ನು ಸೇವಿಸಬೇಕು. ಸರ್ಕಾರದಿಂದ ವಿತರಣೆಯಾಗುವ ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸಬೇಕು ಎಂದರು.
ಮಗು ಜನಿಸಿದ ಅರ್ಧ ತಾಸಿನ ಒಳಗಡೆ ಎದೆಹಾಲು ಕುಡಿಸಬೇಕು. ಜನಿಸಿದ ಮಗುವಿಗೆ ಆರು ತಿಂಗಳವರೆಗೆ ಎದೆಹಾಲು ಬಿಟ್ಟು ಬೇರೆ ಯಾವುದೇ ಪೂರಕ ಪೌಷ್ಟಿಕ ಆಹಾರವನ್ನು ನೀಡಬಾರದು. ಆರು ತಿಂಗಳ ನಂತರ ಎದೆ ಹಾಲು ಜೊತೆಗೆ ಪೌಷ್ಟಿಕ ಆಹಾರವನ್ನು ನೀಡಬಹುದು. ಒಂದು ವರ್ಷದ ನಂತರ ಎಲ್ಲಾ ರೀತಿಯ ಆಹಾರವನ್ನು ನೀಡಬಹುದು. 5 ವರ್ಷದ ಒಳಗಿನ ಮಕ್ಕಳಿಗೆ ಆರೋಗ್ಯ ಇಲಾಖೆ ನಿಗಧಿಪಡಿಸಿರುವ ಲಸಿಕೆಗಳನ್ನು ತಪ್ಪದೆ ಹಾಕಿಸಿಕೊಳ್ಳಬೇಕು. ಕಿಶೋರಾವ್ಯವಸ್ಥೆಯಲ್ಲಿನ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವುದರ ಜೊತೆಗೆ ವೈಯಕ್ತಿಕ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು.
ಒಂದು ಮಗು ಜನಿಸಿದ ನಂತರ ಕನಿಷ್ಠ ಮೂರು ವರ್ಷ ಮತ್ತೊಂದು ಮಗುವನ್ನು ಪಡೆಯಬಾರದು ಅಂತರವಿರಬೇಕು. ಹಾಗಿಂದ್ದಾಗ್ಗೆ ಮಕ್ಕಳು ಸೊಂಕಿಗೆ ಒಳಗಾಗದಂತೆ ನೋಡಿಕೊಳ್ಳಬೇಕು. ಈ ಎಲ್ಲಾ ಅಂಶಗಳ ಬಗ್ಗೆ ಗ್ರಾಮ/ವಾರ್ಡ್ ಆರೋಗ್ಯ ಮತ್ತು ನೈಮಲ್ಯ ಸಮಿತಿಯ ಸದಸ್ಯರು, ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು ಜಾಗೃತಿ ಮೂಡಿಸಬೇಕು. ಆಗ ಮಾತ್ರ ಅಪೌಷ್ಟಿಕತೆಯನ್ನು ನಿವಾರಿಸಬಹುದು ಎಂದರು. ಹಾಗೂ ಬಯಲು ಮಲ ವಿಸರ್ಜನೆ, ಮೂತ್ರ ವಿಸರ್ಜನೆಯಿಂದ ಆಗುವ ಅಪಾಯಗಳ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಟರಾಜ್ ಎಸ್. ಅವರು ಮಾತನಾಡಿ, ಪ್ರಕೃತಿಯಲ್ಲಿ ಕಾಲೋಚಿತವಾಗಿ ಲಭ್ಯವಾಗುವ ಹಣ್ಣುಗಳನ್ನು ಸೇವಿಸಬೇಕು. ನೈಸರ್ಗಿಕವಾಗಿ ಸಿಗುವ ಸೋಪ್ಪನ್ನು ಸೇವಿಸುವುದರಿಂದ ಆರೋಗ್ಯ ವೃದ್ದಿಸುತ್ತದೆ. ಸ್ಥಳೀಯವಾಗಿ ಸಿಗುವ ಹಣ್ಣು-ಹಂಪಲು, ಸೋಪ್ಪು ತರಕಾರಿ, ಮೊಟ್ಟೆ, ದಾನ್ಯಗಳನ್ನು, ಸೇವಿಸಬೇಕು. ತಮ್ಮ ಮನೆಯಲ್ಲಿ ದಿನ ನಿತ್ಯ ಬಳಸುವ ಆಹಾರ ಪದಾರ್ಥಗಳನ್ನೆ ಬಳಸಿ ವಿವಿಧ ಬಗೆಯ ರುಚಿಕರ ಆಹಾರವನ್ನು ತಯಾರಿಸಿ ಸೇವಿಸುವುದರಿಂದ ಕುಟುಂಬದ ಎಲ್ಲಾ ಸದಸ್ಯರಲ್ಲೂ ಆರೋಗ್ಯ ವೃದ್ಧಿಸುತ್ತದೆ. ಜೊತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಗನವಾಡಿಗಳ ಮೂಲಕ ನೀಡುವ ಪೌಷ್ಟಿಕ ಆಹಾರವನ್ನು ಬಳಸಿಕೊಂಡು ಅಪೌಷ್ಟಿಕತೆಯ ಸಮಸ್ಯೆಯನ್ನು ಸಮಾಜದಿಂದ ಹೋಗಲಾಡಿಸಬೇಕು ಎಂದು ಮನವಿ ಮಾಡಿದರು. ಪ್ರಧಾನಮಂತ್ರಿ ಮಾತೃ ವಂದನಾ ಕಾರ್ಯಕ್ರಮದಡಿ ಸರಕಾರಿ ನೌಕರಿಯಲ್ಲಿರುವ ಗರ್ಭಿಣಿ ಮಹಿಳೆಯರನ್ನು ಹೊರತುಪಡಿಸಿ ಉಳಿದ ಎಲ್ಲಾ ಗರ್ಭಿಣಿ ಮಹಿಳೆಯರ ಆರೈಕೆಗಾಗಿ ವಿವಿಧ ಹಂತಗಳಲ್ಲಿ 5 ಸಾವಿರ ರೂ.ಗಳನ್ನು ನೇರವಾಗಿ ಅವರ DBT ಮೂಲಕ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಈ ಕುರಿತು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರನ್ನು,ಶಿಶು ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದು ನೊಂದಾಯಿಸಿಕೊಳ್ಳಬೇಕಾಗುತ್ತದೆ ಎಂದರು.
ಜಿಲ್ಲಾಸ್ವತ್ರೆಯ ಶಸ್ತ್ರಚಿಕಿತ್ಸಕ ಡಾ.ರುದ್ರಮೂರ್ತಿ ಮಾತನಾಡಿ, ಕೋವಿಡ್ ನ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ದುಷ್ಪರಿಣಾಮ ಬೀರುವುದಾಗಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಮೂರನೇ ಅಲೆ ಬರುತ್ತದೋ ಇಲ್ಲವೋ ಗೋತ್ತಿಲ್ಲ.ಆದರೂ ಕೂಡ ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸುವ ಕ್ರಮಗಳನ್ನು ಎಲ್ಲರೂ ಪಾಲಿಸಬೇಕು.ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಎನ್.ಆರ್.ಸಿ ವಿಭಾಗವು 2019-20ನೇ ಸಾಲಿನಲ್ಲಿ 128 ತೀವ್ರ ಅಪೌಷ್ಟಿಕ ಮಕ್ಕಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿ ಗುಣಪಡಿಸಲಾಗಿತ್ತು. ಈ ಮೂಲಕ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿ ಮನ್ನಣೆ ಪಡೆದಿತ್ತು. ಈ ವಿಭಾಗದಲ್ಲಿ ಕೆಲಸ ಮಾಡಿದ ಮಕ್ಕಳ ತಜ್ಞರಾದ ಡಾ.ಗಾಯತ್ರಿ , ಮತ್ತು ಆಹಾರ ತಜ್ಞರಾದ ಮಂಜುಳ ಇವರನ್ನು ಮಕ್ಕಳ ಅಪೌಷ್ಟಿಕತೆ ನಿವಾರಣೆಯ ರಾಷ್ಟ್ರೀಯ ಮೌಲ್ಯ ಮಾಪಕರನ್ನಾಗಿ ಆಯ್ಕೆ ಮಾಡಿದೆ.ಇಂತಹ ಅತ್ಯಂತ ಸುಸಜ್ಜಿತ ವಿಭಾಗಕ್ಕೆ ತೀವ್ರ ಅಪೌಷ್ಠಿಕ ಮಕ್ಕಳನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಆರ್.ಎಂ.ಓ ಡಾ.ರಮೇಶ್, ಶಿಶು ಅಭಿವೃದ್ಧಿ ಅಧಿಕಾರಿ ಗಂಗಾಧರಯ್ಯ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಅಂಗನವಾಡಿ, ಆಶಾ ಹಾಗೂ ಆರೋಗ್ಯ ಕಾರ್ಯಕರ್ತರು ಹಾಜರಿದ್ದರು.
ಇದೇ ವೇಳೆ ಕೇಂದ್ರ ಸರ್ಕಾರದ ಮಾತೃ ವಂದನಾ ಹಾಗೂ ಪೋಷಣ್ ಅಭಿಯಾನ ಯೋಜನೆಗಳ ಕುರಿತು ಮಾಹಿತಿ ನೀಡಲಾಯಿತು. ಗರ್ಭಿಣಿ ಮತ್ತು ಬಾಣಂತಿಯರಿಗೆ ಇದೇ ಸಂದರ್ಭದಲ್ಲಿ ಪೌಷ್ಟಿಕ ಆಹಾರ ವಿತರಿಸಲಾಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..
 
				 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						