ನವದೆಹಲಿ, (ಆಗಸ್ಟ್.12): ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೆಚ್ಚು ಅಪಾಯವಿದೆ ಎಂದು ನಿಮ್ಮ ಗಮನಕ್ಕೆ ತರುವುದು ವಿರೋಧ ಪಕ್ಷದ ನಾಯಕನಾಗಿ ನನ್ನ ಕರ್ತವ್ಯವಾಗಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ತಿಳಿಸಿದರು.
ಈ ಕುರಿತು ಟ್ವಿಟ್ ಮಾಡಿರುವ ಅವರು, ಷೇರು ಮಾರುಕಟ್ಟೆಯನ್ನು ನಿಯಂತ್ರಿಸುವ ಸಂಸ್ಥೆಗಳು ರಾಜಿ ಮಾಡಿಕೊಳ್ಳುತ್ತವೆ. ಅದಾನಿ ಸಮೂಹದ ವಿರುದ್ಧದ ಸಾಗರೋತ್ತರ ವ್ಯವಹಾರವು ಕಾನೂನು ಬಾಹಿರವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲದೇ SEBI ಅಧ್ಯಕ್ಷೆ ಮಾಧಬಿ ಬುಚ್ ಮತ್ತು ಅವರ ಪತಿಯು ಈ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ಹಿಂಡೆನ್ ಬರ್ಗ್ ಆರೋಪಿಸಿದೆ ಎಂದರು.
ದೇಶಾದ್ಯಂತ ಪ್ರಾಮಾಣಿಕ ಹೂಡಿಕೆದಾರರು ಸರ್ಕಾರಕ್ಕೆ ಈ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಹೂಡಿಕೆದಾರರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಂಡರೆ, ಯಾರು ಹೊಣೆಗಾರರಾಗುತ್ತಾರೆ? ಸೆಬಿ ಅಧ್ಯಕ್ಷರೇ, ಅಥವಾ ಗೌತಮ್ ಅದಾನಿಯೇ..?
ಆರೋಪ ಬಂದ ಬೆನ್ನಲ್ಲೇ ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಇನ್ನೂ ಏಕೆ ರಾಜೀನಾಮೆ ನೀಡಲಿಲ್ಲ? ಈ ವಿಷಯವನ್ನು ಸುಪ್ರೀಂ ಕೋರ್ಟ್ ಮತ್ತೊಮ್ಮೆ ಸ್ವಯಂಪ್ರೇರಿತವಾಗಿ ಪರಿಶೀಲಿಸುತ್ತದೆಯೇ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಮತ್ತೊಂದೆಡೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ(ಸೆಬಿ) ಅಧ್ಯಕ್ಷೆ ಮಾಧವಿ ಬುಚ್ ಹಾಗೂ ಅವರ ಪತಿ ಆದಾನಿ ಸಮೂಹ ಕಂಪನಿಗಳ ಷೇರು ಹೊಂದಿದ್ದರು ಎಂಬ ಮಾಹಿತಿ ಇರುವ ಹಿಂಡನ್ ಬರ್ಗ್ ಸಂಶೋಧನಾ ಸಂಸ್ಥೆಯ ವರದಿ ಬಗ್ಗೆ ತನಿಖೆ ನಡೆಸಬೇಕಿದ್ದು, ಅದಕ್ಕೆ ಜಂಟಿ ಸಂಸದೀಯ ಸಮಿತಿ ರಚಿಸಬೇಕೆಂದು ಕಾಂಗ್ರೆಸ್ ಭಾನುವಾರ ಆಗ್ರಹಿಸಿದೆ.
ಇಂಥದೊಂದು ಗಂಭೀರ ಆರೋಪದ ಬಗ್ಗೆ ತನಿಖೆ ನಡೆಸಲು ಕೇಂದ್ರ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಸೆಬಿಯಂತಹ ಪ್ರತಿಷ್ಠಿತ ಸಂಸ್ಥೆಯೇ ಹಗರಣದಲ್ಲಿ ಭಾಗಿಯಾಗಿರುವುದರಿಂದ ಸಮಗ್ರ ತನಿಖೆಯಾಗಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
‘ಹಿಂಡನ್ಬರ್ಗ್ ವರದಿಯಲ್ಲಿ ದಾಖಲಿಸಿರುವ ಆರೋಪದಲ್ಲಿ ಪ್ರಧಾನಿ ಮೋದಿ ಅವರ ಆಪ್ತ ಉದ್ಯಮಿ ಆದಾನಿ ಅವರಿಗೆ ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ‘ಸೆಬಿ’ ಕ್ಲೀನ್ ಚೀಟ್ ನೀಡಿತ್ತು. ಆದರೆ ಈಗ ಹಿಂಡನ್ಬರ್ಗ್ ಮಾಡಿರುವ ಆರೋಪದಲ್ಲಿ ‘ಸೆಬಿ’ ಮುಖ್ಯಸ್ಥರೇ ಅದಾನಿ ಸಮೂಹದ ಭಾಗವಾಗಿದ್ದಾರೆ.
ಮಧ್ಯಮವರ್ಗದ ಜನ ಕಷ್ಟಪಟ್ಟು ದುಡಿದು ಉಳಿಸಿದ ಹಣವನ್ನು ಷೇರುಪೇಟೆಯಲ್ಲಿ ಹೂಡಿಕೆ ಮಾಡುತ್ತಾರೆ. ಇಂಥ ಹೂಡಿಕೆದಾರರ ಹಿತವನ್ನು ‘ಸೆಬಿ’ ರಕ್ಷಿಸಬೇಕಿದೆ. ಆದರೆ, ಅದರ ಅಧ್ಯಕ್ಷರೇ ದೊಡ್ಡ ಹಗರಣದ ಭಾಗವಾಗಿರುವುದರಿಂದ ತನಿಖೆಗೆ ಜಂಟಿ ಸಂಸದೀಯ ಸಮಿತಿಯನ್ನೇ ರಚಿಸಬೇಕಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ‘ಟ್ವಿಟರ್’ ಸಂದೇಶದಲ್ಲಿ ಒತ್ತಾಯಿಸಿದ್ದಾರೆ.
ಪ್ರಧಾನಿ ಮೋದಿ 7 ದಶಗಳಿಂದ ಕಾರ್ಯನಿರ್ವಹಿ ಸುತ್ತಿರುವ ಸೆಬಿ ಜತೆಗೆ ರಾಜಿ ಮಾಡಿಕೊಂಡಿರುವ ತಮ್ಮ ಆಪ್ತನನ್ನು ಸಂಸದೀಯ ಜಂಟಿ ಸಮಿತ ರಚನೆ ಆಗುವವರೆಗೂ ರಕ್ಷಿಸುತ್ತಾರೆ ಎಂದು ಖರ್ಗೆ ಆರೋಪಿಸಿದ್ದಾರೆ.
ಆರೋಪ ಕೇಳಿ ಬರುತ್ತಿದ್ದಂತೆಯೇ ‘ಸೆಬಿ’ಯ ಅಧಿಕೃತ ‘ಟ್ವಿಟರ್’ ಖಾತೆ ಲಾಕ್ ಮಾಡಲಾಗಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….