ದೆಹಲಿ, (ಮೇ18): ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ. ಶನಿವಾರ (ಮೇ 20) ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಮುಹೂರ್ತ ನಿಗದಿಯಾಗಿದೆ.
ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದ ಡಿ.ಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿ (ಡಿಸಿಎಂ) ಸಚಿವ ಸಂಪುಟ ಸೇರಲಿದ್ದಾರೆ. ಅವರಿಗೆ ಇತರ ಪ್ರಬಲ ಖಾತೆಗಳನ್ನೂ ಕೊಡುವ ಸಾಧ್ಯತೆಯಿದೆ.
ಒಟ್ಟು 5 ವರ್ಷಗಳ ಅಧಿಕಾರ ಅವಧಿಯಲ್ಲಿ ತಲಾ ಎರಡೂವರೆ ವರ್ಷಗಳಾಗಿ ವಿಂಗಡಿಸಲಾಗಿದೆ. ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ, ಎರಡನೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಅಧಿಕಾರ ಅನುಭವಿಸಲಿದ್ದಾರೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ‘ರಾಷ್ಟ್ರೀಯ ಸುದ್ದಿವಾಹಿನಿ ANI’ ವರದಿ ಮಾಡಿದೆ.
ಬುಧವಾರ ಮಧ್ಯರಾತ್ರಿಯವರೆಗೂ ಖರ್ಗೆ ಅವರ ನಿವಾಸದಲ್ಲಿ ಚುರುಕಿನ ರಾಜಕೀಯ ಬೆಳವಣಿಗೆಗಳು ನಡೆದವು. ಹಲವು ನಾಯಕರೊಂದಿಗೆ ಖರ್ಗೆ ಸಮಾಲೋಚನೆ ನಡೆಸಿದರು. ಸತತ ಮೂರು ದಿನಗಳ ಸುದೀರ್ಘ ರಾಜಕೀಯ ಬೆಳವಣಿಗೆಗಳು ಖರ್ಗೆ ಅವರ ನಿರ್ಣಯದೊಂದಿಗೆ ಒಂದು ಹಂತಕ್ಕೆ ಬಂದವು.
ಮೇ 20ಕ್ಕೆ ಬೇಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನೂ ಕರೆಯಲಾಗಿದೆ. ಅಂದು ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ. ಈ ಮೂಲಕ ಕರ್ನಾಟಕದಲ್ಲಿ ಸಿದ್ದರಾಮಯ್ಯ 2ನೇ ಬಾರಿಗೆ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ. ಇದೀಗ 75ರ ಹರೆಯದಲ್ಲಿರುವ ಸಿದ್ದರಾಮಯ್ಯ ಕುರುಬ ಸಮಾಜದ ಪ್ರಮುಖ ನಾಯಕರಾಗಿದ್ದಾರೆ. ಕರ್ನಾಟಕದ ಇತರ ಸಮಾಜಗಳು, ಮುಖ್ಯವಾಗಿ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ಸಮುದಾಯಗಳು ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿವೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಡಿ.ಕೆ.ಶಿವಕುಮಾರ್ ಅವರೊಂದಿಗೆ ಸಿದ್ದರಾಮಯ್ಯ ಶ್ರಮದ ಕಾಣ್ಕೆಯೂ ಮುಖ್ಯವಾಗಿತ್ತು.
ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಬ್ಬರೂ ಹೈಕಮಾಂಡ್ ಎದುರು ತಮ್ಮ ವಾದ ಮುಂದಿಟ್ಟು ನಿರ್ಣಕ್ಕಾಗಿ ಎದುರು ನೋಡುತ್ತಿದ್ದರು. ‘ನಾನು ನಿಮಗೆ ಹೇಳಬೇಕಾದ್ದು ಏನೂ ಇಲ್ಲ. ಹೈಕಮಾಂಡ್ ನಾಯಕರಿಗೆ ಏನೆಲ್ಲಾ ತಿಳಿಯಸಬೇಕೋ ತಿಳಿಸಿದ್ದೇನೆ. ಅವರ ನಿರ್ಧಾರಕ್ಕಾಗಿ ಕಾಯುತ್ತಿದ್ದೇನೆ’ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….