ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾದ ನವರಾತ್ರಿಯ ಕೊನೆಯ ದಿನವಾದ ಶುಕ್ರವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರಿನ ಆಯ್ದ ಭಾಗಗಳ ದೀಪಾಲಂಕರವನ್ನು ವೀಕ್ಷಣೆ ಮಾಡಿದ್ದು, ಅಲ್ಲಿನ ಅದ್ಭುತ ದೃಶ್ಯಗಳಿಗೆ ಮನಸೋತರು.
ಅಂಬಾರಿ ಬಸ್ ಮೂಲಕ ಇಂಧನ ಸಚಿವರಾದ ಕೆ.ಜೆ ಜಾರ್ಜ್, ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿಮಹದೇವಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಉನ್ನತ ಶಿಕ್ಷಣದ ಕ್ಯಾಬಿನೆಟ್ ಸಚಿವರಾದ ಡಾ.ಎಂ.ಸಿ.ಸುಧಾಕರ್.
ಚಾಮುಂಡೇಶ್ವರಿ ವಿದ್ಯುತ್ ನಿಗಮ ನಿಯಮಿತದ ಅಧ್ಯಕ್ಷರಾದ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಗಣೇಶ್ ಪ್ರಸಾದ್, ಮೂಡ ಅಧ್ಯಕ್ಷರಾದ ಮರಿಗೌಡ ಸೇರಿದಂತೆ ಇನ್ನಿತರ ಅಧಿಕಾರಿಗಳೊಂದಿಗೆ ಮೈಸೂರಿನ ಸುಂದರ ದೀಪಾಲಂಕಾರದ ದೃಶ್ಯವನ್ನು ಕಣ್ತುಂಬಿಕೊಂಡರು.
ಅಂಬಾರಿ ಬಸ್ ಸಂಚರಿಸುವ ಮಾರ್ಗದುದ್ದಕ್ಕೂ ಮುಖ್ಯಮಂತ್ರಿಗಳನ್ನು ನೋಡಲು ಜನರು ಕಿಕ್ಕಿರಿದು ನಿಂತಿದ್ದಂತಹ ಜನರಿಗೆ ಸಿದ್ದರಾಮಯ್ಯ ಅವರು ನಾಡಹಬ್ಬ ದಸರಾ ಮಹೋತ್ಸವದ ಶುಭಾಶಯ ತಿಳಿಸಿದರು.
ಈ ಸಂದರ್ಭದಲ್ಲಿ ಅಂಬಾರಿ ಬಸ್ ನಲ್ಲಿಯೇ ಕುಳಿತು ಬನ್ನಿಮಂಟಪದಲ್ಲಿ ನಡೆಯುತ್ತಿರುವ ಡ್ರೋನ್ ಶೋ ಅನ್ನು ವೀಕ್ಷಣೆ ಮಾಡಿ, ಸಂತಸ ವ್ಯಕ್ತಪಡಿಸಿದರು.

ರಾಮಸ್ವಾಮಿ ವೃತ್ತದಿಂದ ಆರಂಭವಾದ ದೀಪಾಲಂಕಾರ ವೀಕ್ಷಣೆಯು ಬಸವೇಶ್ವರ ವೃತ್ತ, ವಿದ್ಯಾಪೀಠ ವೃತ್ತ, ಹಾರ್ಡಿಂಜ್ ಸರ್ಕಲ್, ಕೆ.ಆರ್.ಸರ್ಕಲ್, ಆಯುರ್ವೇದಿಕ್ ವೃತ್ತ, ಹೈವೆ ವೃತ್ತದ ಮೂಲಕ ಸಾಗಿ ಎಲ್ಐಸಿ ವೃತ್ತದಲ್ಲಿ ಮುಕ್ತಾಯಗೊಂಡಿತು.
ಲೈಟಿಂಗ್ಸ್ ನೋಡಲು ತಮ್ಮ ಜೊತೆ ಆಗಮಿಸಿದಂತಹ ಸಚಿವರಿಗೆ ಮೈಸೂರಿನ ಅರಮನೆ ಹಾಗೂ ಮಾರ್ಗ ಮಧ್ಯದಲ್ಲಿ ಬರುವಂತಹ ಸ್ಥಳಗಳ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ವಿವರಿಸಿ, ಅದರ ಹಿನ್ನೆಲೆ ಹಾಗೂ ಮಹತ್ವವನ್ನು ತಿಳಿಸಿಕೊಟ್ಟರು.

 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						