ಬೆಂಗಳೂರು: ಬೈಕ್‌ನಲ್ಲಿ ವೇಗವಾಗಿ ಹೋಗುತ್ತಿದ್ದ ಪೊಲೀಸ್ ಪೇದೆಯೊಬ್ಬರು ಆಯತಪ್ಪಿ ಪಾದಚಾರಿ ಮಾರ್ಗಕ್ಕೆ ಗುದ್ದಿ, ಟಾಟಾ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿರುವ ದುರ್ಘಟನೆ ಬ್ಯಾಟರಾಯನಪುರದ ನಾಯಂಡನಹಳ್ಳಿ ರಿಂಗ್ ರಸ್ತೆಯ ಸರ್ವಿಸ್ ರಸ್ತೆಯಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆಯ ಹುಚ್ಚಂಗಿದುರ್ಗದ ಸಿಎಆರ್ ಮನು (27 ವರ್ಷ)ಮೃತಪಟ್ಟವರು.
ಜೆಜೆ ನಗರದಲ್ಲಿ ಬಾಡಿಗೆಗೆ ಮನೆ ಮಾಡಿಕೊಂಡಿದ್ದ ಮನು ರಾತ್ರಿ 8.20ರ ವೇಳೆ ಸ್ನೇಹಿತನ ಮನೆಗೆ ಹೋಗಿ ಮನೆಗೆ ಹೋಂಡಾ ಶೈನ್ ಬೈಕ್‌ನಲ್ಲಿ ನಾಗರಭಾವಿಯಿಂದ ನಾಯಂಡನಹಳ್ಳಿ ಕಡೆಗೆ ವೇಗವಾಗಿ ಹೋಗುತ್ತಾ ರಿಂಗ್ ರಸ್ತೆಯ ಸರ್ವಿಸ್ ರಸ್ತೆಯಲ್ಲಿ ಮರಳಿನ ಮೇಲೆ ಹತ್ತಿದರಿಂದ ಆಯತಪ್ಪಿ ಪಾದಚಾರಿ ಮಾರ್ಗಕ್ಕೆ ಗುದ್ದಿ ಗೂಡ್ಸ್ ಎಡಭಾಗಕ್ಕೆ ಡಿಕ್ಕಿಯಾಗಿ ಡಿಕ್ಕಿಯಾಗಿ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೂಡಲೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ ಬ್ಯಾಟರಾಯನಪುರ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಅನಿತಾ ಹದ್ದಣ್ಣವರ್ ತಿಳಿಸಿದ್ದಾರೆ