ದೊಡ್ಡಬಳ್ಳಾಪುರ : ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿಯಾಗಿ ಒಂದು ವರ್ಷ ಪೂರೈಸಿದೆ. ಮೊದಲ ಅವಧಿಯಲ್ಲಿನ ವೈಫಲ್ಯಗಳ ಸರಣಿ ಎರಡನೇ ಅವಧಿಯಲ್ಲಿಯೂ ಮುಂದುವರೆದಿದ್ದು, ಅವರ ಆಡಳಿತ ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.
ಎರಡನೆ ಅವಧಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿ ಇಂದಿಗೆ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರಣಿ ಟ್ವಿಟ್ ಮೂಲಕ ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ.
ಸಂವಿಧಾನದ 370ನೇ ಆರ್ಟಿಕಲ್ ರದ್ದತಿ, ಅಯೋಧ್ಯೆ ತೀರ್ಪು, ತ್ರಿವಳಿ ತಲಾಖ್ ರದ್ದತಿ ತಮ್ಮ ಸಾಧನೆ ಎಂದು ಪ್ರಧಾನಿಯವರು ಜನರಿಗೆ ಬರೆದ ಪತ್ರದಲ್ಲಿ ಹೇಳಿಕೊಂಡಿದ್ದಾರೆ. ಇವನ್ನು ಬಿಟ್ಟು ದೇಶದ ಬಡವರು, ರೈತರು, ಕಾರ್ಮಿಕರು, ಮಹಿಳೆಯರಿಗಾಗಿ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿರುವ ಅವರು.
ಹಿಂದೆ ಹೇಳಿದ್ದ ಸುಳ್ಳುಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದೇ ಪ್ರಧಾನಿ ಮೋದಿಯವರ ಕಳೆದ ಒಂದು ವರ್ಷದ ಸಾಧನೆ.ನಿನ್ನೆ ಅವರು ದೇಶದ ಜನರನ್ನು ಕುರಿತು ಪತ್ರವನ್ನು ಬರೆದಿದ್ದಾರೆ. ಅದರಲ್ಲಿ ಸಂವಿಧಾನದ 370ನೇ ಆರ್ಟಿಕಲ್ ರದ್ದತಿ, ರಾಮಮಂದಿರ, ತ್ರಿವಳಿ ತಲಾಖ್ ರದ್ದತಿಯನ್ನು ಉಲ್ಲೇಖಿಸಿದ್ದಾರೆ.
ಪ್ರಧಾನಿ ಮೋದಿಯವರೇ, ಮೊದಲ ಅವಧಿಯಲ್ಲಿ ನೀವೇ ನೀಡಿದ್ದ ಕಪ್ಪು ಹಣ ವಾಪಸ್, ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದುಪ್ಪಟ್ಟು ಬಗೆಗಿನ ಆಶ್ವಾಸನೆಗಳೇನಾಯ್ತು? ಇವುಗಳ ಬಗ್ಗೆ ಜನತೆಗೆ ಬರೆದಿದ್ದ ಪತ್ರದಲ್ಲಿ ತಿಳಿಸಬೇಕಿತ್ತಲ್ಲಾ?
ಇಂದು ಕೇಂದ್ರ ಅಂಕಿಅಂಶಗಳ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ಜಿಡಿಪಿ ಕಳೆದ ಡಿಸೆಂಬರ್ ಅಂತ್ಯಕ್ಕೆ 4.1℅ಕ್ಕೆ ತಲುಪಿದೆ. ಇದು ಈ ವರ್ಷದ ಮೊದಲ 3 ತಿಂಗಳಲ್ಲಿ 3.1% ಮುಟ್ಟಿದೆ. ಕಳೆದ 11 ವರ್ಷಗಳಲ್ಲೆ ಇದು ಕನಿಷ್ಠ ದರ.
ಮಾತು ಮಾತಿಗೆ ಪಾಕಿಸ್ತಾನದ ಕಡೆ ಬೊಟ್ಟು ಮಾಡುವ ಬಿಜೆಪಿಗರೇ, ಈ ಸಾಲಿನ ಭಾರತದ ಜಿಡಿಪಿ ಪಾಕಿಸ್ತಾನ ಮಾತ್ರವಲ್ಲ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳದ ಜಿಡಿಪಿಗಿಂತಲೂ ಕಡಿಮೆ ಇದೆ ಎನ್ನುವುದು ಗೊತ್ತಾ? ಇದಕ್ಕೆ ಯಾರು ಹೊಣೆ?
ಪ್ರಧಾನಿ ನರೇಂದ್ರಮೋದಿಯವರೇ, ತ್ರಿವಳಿ ತಲಾಖ್, ಆರ್ಟಿಕಲ್370 ರದ್ದತಿ ಬದಿಗಿಡಿ, ಉದ್ಯೋಗ ಸೃಷ್ಟಿ, ಕೃಷಿ, ಕೈಗಾರಿಕೆ, ಸೇವಾ ವಲಯ, ಬಂಡವಾಳ ಹೂಡಿಕೆಯ ಬೆಳವಣಿಗೆಗೆ ಸಂಬಂಧಿಸಿದ ದಾಖಲೆಗಳನ್ನು ಜನರಿಗೆ ತೋರಿಸಿ, ನಿಮ್ಮ ಸಾಧನೆ ಏನೆಂದು ಎಲ್ಲರೂ ನೋಡಲಿ.
ಒಬ್ಬ ವ್ಯಕ್ತಿಯ ನಾಯಕತ್ವ ಮತ್ತು ಸಾಮರ್ಥ್ಯವನ್ನು ಭಾವನಾತ್ಮಕ ವಿಚಾರಗಳಿಂದ ಅಥವಾ ಭಾಷಣಗಳಿಂದ ಅಳೆಯುವುದಲ್ಲ. ದೇಶದ ಜನರ ಬದುಕಿನಲ್ಲಿ ಏನು ಬದಲಾವಣೆ ತಂದಿದ್ದಾರೆ ಎಂಬುದು ಮುಖ್ಯ.
ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲಾಗದ ಭಯದಿಂದ ಪ್ರಧಾನಿಗಳು ಪತ್ರದ ಮೂಲಕ ತಮ್ಮ ವೈಫಲ್ಯಗಳನ್ನು ಸಾಧನೆಗಳೆಂದು ಹೇಳಲು ಹೊರಟಿದ್ದಾರೆ.
ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಿರುವುದರಿಂದ ರೈತರ ಆದಾಯ ಸ್ಥಿರವಾಗಿದೆ ಎಂದು ಮೋದಿಯವರು ಪತ್ರದಲ್ಲಿ ಹೇಳಿದ್ದಾರೆ. ಆದರೆ ನಮ್ಮದೇ ರಾಜ್ಯದ ಬೀದರ್, ಕಲಬುರಗಿ, ರಾಯಚೂರು ಭಾಗದಲ್ಲಿ ಬೆಳೆದ ತೊಗರಿ ಬೇಳೆ ಕೊಳ್ಳುವವರಿಲ್ಲದೆ ಬೆಳೆಗಾರರ ಬದುಕು ಸಂಕಷ್ಟದಲ್ಲಿದೆ. ಇತರೆ ಬೆಳೆಗಳನ್ನು ಬೆಳೆದ ರೈತರ ಪಾಡು ಇದಕ್ಕಿಂದ ಭಿನ್ನವಲ್ಲ.
ಪ್ರಧಾನಿ ಮೋದಿ ಅವರೇ, ನಿಮಗೆ ನಿಜವಾಗಿ ರೈತರ ಬಗ್ಗೆ ಕಾಳಜಿಯಿದ್ದರೆ ವಿರೋಧ ಪಕ್ಷಗಳು, ರೈತರ ವಿರೋಧದ ಹೊರತಾಗಿಯೂ ಎಂಪಿಎಂಸಿ ಕಾಯಿದೆಗೆ ತಿದ್ದುಪಡಿ ಏಕೆ ಮಾಡಿದ್ರಿ?ಬಂಡವಾಳಶಾಹಿಗಳು ಮತ್ತು ಉದ್ದಿಮೆದಾರರನ್ನು ಉದ್ಧಾರ ಮಾಡಲು ಕಾಯಿದೆಗೆ ತಿದ್ದುಪಡಿ ತಂದು, ರೈತರ ಬಗ್ಗೆ ಕಾಳಜಿ ಇದೆ ಎಂದರೆ ಹೇಗೆ ಎಂದು ಆರೋಪಿಸಿದ್ದಾರೆ.
 
				 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						