ಬೆಂಗಳೂರು : ನಗರದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಬಿ.ಬಿ.ಎಂ.ಪಿ ನಿಯಂತ್ರಣಾ ಕೊಠಡಿ/ಸಹಾಯವಾಣಿಗಳಿಗೆ ಸಾರ್ವಜನಿಕರಿಂದ ಬರುವ ಕರೆಗಳನ್ನು ಸ್ವೀಕರಿಸಿ ತಕ್ಷಣ ಸ್ಪಂದಿಸಬೇಕು. ಕರೆ ಸ್ವೀಕರಿಸದೇ ಇರುವ ಬಗ್ಗೆ ದೂರುಗಳು ಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದರು.
ಮುಂಗಾರು ಮಳೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಇಂದು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ನಿನ್ನೆ ಮೊನ್ನೆ ಸುರಿದ ಅಕಾಲಿಕ ಮಳೆಯಿಂದ ಸಾವೀಗೀಡಾದ ಇಬ್ಬರು ಹೆಣ್ಣು ಮಕ್ಕಳ ಕುಟುಂಬಕ್ಕೆ ಬಿ.ಬಿ.ಎಂ.ಪಿ ವತಿಯಿಂದ ತಲಾ 5 ಲಕ್ಷ ರೂ.ಗಳ ಪರಿಹಾರ ಕೊಡಲಾಯಿತು. ಅಪಾಯಕಾರಿ ರೆಂಬೆ ಕೊಂಬೆಗಳನ್ನು ಗುರುತಿಸಿ ಕತ್ತರಿಸುವ ಕೆಲಸ ನಿರಂತರವಾಗಿ ಆಗಬೇಕು ಎಂದ ಅವರು, ಎರಡು ದಿನಗಳಲ್ಲಿ ನಗರದಲ್ಲಿ ಮಳೆಯಿಂದ ಬಿದ್ದ ಮರಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ನಗರ ಸಂಚಾರಕ್ಕೆ ಬಂದ ಸಂದರ್ಭದಲ್ಲಿ ಯಾವುದೇ ಲೋಪ ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ನಗರದಲ್ಲಿ ಯಾವುದೇ ಸಾವು, ನೋವು ಸಂಭವಿಸದಂತೆ ಅಗತ್ಯವಿರುವ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ಬಿ.ಬಿ.ಎಂ.ಪಿ, ಪೊಲೀಸ್, ಅರಣ್ಯ, ಸಾರಿಗೆ ಹಾಗೂ ಅಗ್ನಿಶಾಮಕ ಇಲಾಖೆಗಳು ಸಮನ್ವಯ ಸಾಧಿಸಿ ಕೆಲಸ ಮಾಡಬೇಕು ಎಂದು ಆದೇಶಿಸಿದರು. ಮರಗಳ ಕೆಳೆಗೆ ಯಾವುದೇ ವಾಹನಗಳನ್ನು ನಿಲ್ಲಿಸದಂತೆ ಮುನ್ನೆಚ್ಚರಿಕೆ ವಹಿಸಿ ಅನಾಹುತವಾಗುವುದನ್ನು ತಡೆಗಟ್ಟಲು ಕ್ರಮ ವಹಿಸಲು ಸೂಚಿಸಿದ ಅವರು, ನಗರದ 8 ವಲಯಗಳಲ್ಲಿ ಮ್ಯಾನ್ ಹೋಲ್‍ಗಳನ್ನು ಮುಚ್ಚಬೇಕು. ಜೆಟ್ಟಿಂಗ್ ಮೆಶೀನ್‍ಗಳು ಲಭ್ಯವಿರಬೇಕು ಎಂದರು.
ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ ಬೆಂಗಳೂರು ನಗರದ ಎಲ್ಲ ಎಂಟು ವಲಯಗಳಲ್ಲಿ ಬಿ.ಬಿ.ಎಂ.ಪಿ, ಬೆಸ್ಕಾಂ, ಒಳಚರಂಡಿ ಮಂಡಳಿ ಹಾಗೂ ಪೋಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳನ್ನು ಒಳಗೊಂಡ ತಂಡವನ್ನು ರಚಿಸಿ ಮಳೆ ಸಂಬಂಧಿ ದೂರುಗಳು ಬಂದಲ್ಲಿ ತಕ್ಷಣವೇ ಕ್ರಮವಹಿಸಬೇಕು ಎಂದರು. ಅನಾಹುತಗಳು ಸಂಭವಿಸಿದಲ್ಲಿ ಸಹಾಯಕ ಅಭಿಯಂತರರನ್ನು ಹೊಣೆ ಮಾಡಲಾಗುವುದು ಎಂದು ತಿಳಿಸಿದರು.
ಸಚಿವ ಭೈರತಿ ಬಸವರಾಜ್, ಮುಖ್ಯ ಕಾರ್ಯದರ್ಶಿ ಟಿ.ಯೆಂ.ವಿಜಯಭಾಸ್ಕರ್, ಬಿ.ಬಿ.ಎಂ.ಪಿ.ಆಯುಕ್ತ ಬಿ.ಹೆಚ್ .ಅನಿಲ್ ಕುಮಾರ್, ಬೆಂಗಳೂರು ನಗರ ಪೋಲೀಸ್ ಆಯುಕ್ತ ಭಾಸ್ಕರ್ ರಾವ್, ನಗರಾಭಿವೃದ್ಧಿ ಇಲಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಉಪಸ್ಥಿತರಿದ್ದರು.
 
				 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						