ಬೆಂಗಳೂರು: ಕಾಂಗ್ರೆಸ್ ಸದಸ್ಯರ ತೀವ್ರ ವಿರೋಧ ಹಾಗೂ ಗದ್ದಲ, ಬಹಿಷ್ಕಾರದ ನಡುವೆಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್ ಮಂಡನೆ ಮಾಡಿದರು.
2021-2022ನೇ ಸಾಲಿನ ಆಯವ್ಯಯ ಮಂಡನೆ ಮಾಡುತ್ತಿರುವ ಯಡಿಯೂರಪ್ಪ ಅವರು, ಸರ್ಕಾರದ ಸಾಧನೆಗಳನ್ನು ವಿವರಿಸುತ್ತಿದ್ದಾರೆ. ಇದೇ ವೇಳೆ ಕರೊನಾ ಸಂದರ್ಭದಲ್ಲಿ ಶ್ರಮಿಸಿದವರಿಗೆ ಧನ್ಯವಾದ ಅರ್ಪಿಸಿದ್ದಾರೆ
ಕೋವಿಡ್ ಸಂಕಷ್ಟದ ನಡುವೆಯೂ ಸರ್ಕಾರ ರಾಜ್ಯದ ಜನರ ಹಿತಾಸಕ್ತಿ ಕಾಪಾಡುವಲ್ಲಿ ಸಫಲವಾಗಿದೆ. ಕೋವಿಡ್ ಸಂಕಷ್ಟ ದುಸ್ವಪ್ನವಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ 2 ಶಿಶುಪಾಲನಾ ಕೇಂದ್ರಗಳ ಸ್ಥಾಪನೆ ಮಾಡಲಾಗಿದ್ದು, ಕೋವಿಡ್ ಗೆ ಉಚಿತ ಚಿಕಿತ್ಸೆ ನೀಡಲಾಗುಚತ್ತಿದೆ. ಕೋವಿಡ್ ಲಸಿಕೆ ಹಂಚಿಕೆಯಲ್ಲಿ ರಾಷ್ಟ್ರದ ಗಮನ ಸೆಳೆದಿದ್ದೇವೆಂದು ಹೇಳಿದ್ದಾರೆ.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ಆಯವ್ಯಯ ಮಂಡನೆ ಮಾಡಿರುವ ಯಡಿಯೂರಪ್ಪ ಅವರು ಮಹಿಳೆಯರಿಗೆ ವಿಶೇಷವಾದ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.
ಜಿಲ್ಲಾ ಕೇಂದ್ರಗಳಲ್ಲಿ 2 ಶಿಶುಪಾಲನಾ ಕೇಂದ್ರಗಳ ಸ್ಥಾಪನೆ, ರಾಜ್ಯಾದ್ಯಂತ 60 ಸಾವಿರ ಮಹಿಳೆಯರಿಗೆ ಉದ್ಯೋಗ ಒದಗಿಸಲಾಗುತ್ತದೆ ಎಂದು ಹೇಳಿದ್ದಾರೆ.
ಮಹಿಳೆಯರಿಗೆ ಭರ್ಜರಿ ಗಿಫ್ಟ್: ಮಹಿಳಾ ಉದ್ಯಮಿಗಳಿಗೆ ಶೇ.4ರ ಬಡ್ಡಿ ದರದಲ್ಲಿ 2 ಕೋಟಿ ರೂ.ವರೆಗೂ ಸಾಲ ನೀಡಲಾಗುತ್ತದೆ. ಹಪ್ಪಳ, ಉಪ್ಪಿನಕಾಯಿ ತಯಾರಕರಿಗೆ ಆನ್ಲೈನ್ ಮಾರುಕಟ್ಟೆ ಒದಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ತಾಯಂದಿರ ಎದೆ ಹಾಲಿನ ಬ್ಯಾಂಕ್ ಸ್ಥಾಪನೆಗೆ ರೂ.2.5 ಕೋಟಿ. ಬಿಎಂಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ರಿಯಾಯಿತಿ ಪಾಸ್ ನೀಡಲಾಗುತ್ತದೆ. ವನಿತಾ ಸಂಗಾತಿ ಹೆಸರಿನಲ್ಲಿ ಮಹಿಳೆಯರಿಗೆ ಬಸ್ ಪಾಸ್ ನೀಡಲಾಗುವುದು ಎಂದು ಹೇಳಿದ್ದಾರೆ. ಅಲ್ಲದೆ, ನಿರ್ಭಯಾ ಯೋಜನೆಯಡಿ ಬೆಂಗಳೂರಿನಲ್ಲಿ 7,500 ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡಲಿದ್ದು, ಮಹಿಳಾ ಉದ್ಯಮಿಗಳಿಗೆ ಹೊಸ ಯೋಜನೆ ತರಲಿದ್ದೇವೆ ಎಂದು ತಿಳಿಸಿದ್ದಾರೆ.
ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿ ಕರ್ನಾಟಕ ಯಾತ್ರಿ ನಿವಾಸ: ವಿವಿಧ ಧರ್ಮ, ಮಠಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ 2021-22ನೇ ಸಾಲಿನ ಬಜೆಟ್ನಲ್ಲಿ ಅನುದಾನಗಳನ್ನು ಪ್ರಕಟಿಸಿದ್ದಾರೆ,
ಪ್ರಸಕ್ತ ಸಾಲಿನ ರಾಜ್ಯದ ಆಯವ್ಯಯ ಮಂಡನೆ ಮಾಡುತ್ತಿರುವ ಯಡಿಯೂರಪ್ಪ ಅವರು, ಕ್ರೈಸ್ತ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ರೂ. 200 ಕೋಟಿ, ವೀರಶೈವ ಲಿಂಗಾಯತ ಅಭಿವೃದ್ಧಿ ರೂ.500 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ.
ಒಕ್ಕಲಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು, ಒಕ್ಕಲಿಗರ ಸರ್ವತೋಮುಖ ಅಭಿವೃದ್ಧಿಗೆ ರೂ. 500 ಕೋಟಿ ಅನುದಾನ ನೀಡಲಾಗುವುದು. ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 50 ಕೋಟಿ, ಆದಿಚುಂಚನಗಿರಿ ನಾಥ ಪಾರಂಪರಿಕ ಕೇಂದ್ರಕ್ಕೆ ರೂ. 10 ಕೋಟಿ, ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿ ಕರ್ನಾಟಕ ಯಾತ್ರಿ ನಿವಾಸ ನಿರ್ಮಾಣಕ್ಕೆ ರೂ.10 ಕೋಟಿ ಅನುದಾನ ಮೀಸಲಿಡಲಾಗಿದೆ.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂ. ನೀಡಲಾಗುತ್ತಿದ್ದು, ಕಿತ್ತೂರು ಕೋಟೆ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುವುದು. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಜಗಜ್ಯೋತಿ ಬಸವಣ್ಣ ಜನ್ಮಸ್ಥಳ ಅಭಿವೃದ್ಧಿಗಾಗಿ ರೂ. 5 ಕೋಟಿ, ಲಿಂಗೈಕ್ಯರಾದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ್ ಶ್ರೀಗಳು ಹಾಗೂ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳ ಸ್ಮೃತಿವನಕ್ಕಾಗಿ ರೂ. 2 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಹೇಳಿದ್ದಾರೆ.
ಕೃಷಿ ವಲಯಕ್ಕೆ ರೂ 31 ಸಾವಿರ ಕೋಟಿ: ಕೃಷಿ ವಲಯಕ್ಕೆ ಬರೋಬ್ಬರಿ 31,021 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಕೃಷಿ ವಲಯದ ಅಭಿವೃದ್ಧಿಗಾಗಿ ಹಲವಾರು ಹೊಸ ಯೋಜನೆಗಳನ್ನು ಕೈಗೊಳ್ಳಲಾಗಿದೆ.
ಈ ಬಾರಿ ನೀರಾವರಿ ಮತ್ತು ಮಾರುಕಟ್ಟೆ ವ್ಯವಸ್ಥೆ ಒದಗಿಸುವತ್ತ ಯಡಿಯೂರಪ್ಪ ಸರಕಾರ ಹೆಚ್ಚು ಗಮನಹರಿಸಿದೆ. ರಾಜ್ಯದ ಹಲವು ಭಾಗಗಳಲ್ಲಿ ಕೃಷಿ ಉತ್ಪನ್ನ ಆಧಾರಿತ ಮಾರುಕಟ್ಟೆ ನಿರ್ಮಾಣಕ್ಕೆ ಯೋಜನೆ ಹಮ್ಮಿಕೊಂಡಿದೆ. ಜತೆಗೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಹಲವಾರು ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ಬಜೆಟ್ನಲ್ಲಿ ಘೋಷಿಸಲಾಗಿದೆ.
ಸಿಂಗೇನ ಅಗ್ರಹಾರದಲ್ಲಿ ಹಣ್ಣು ಮಾರುಕಟ್ಟೆ ನಿರ್ಮಾಣ, ಚಮಾರಾಜನಗರದಲ್ಲಿ ಅರಿಶಿನ ಮಾರುಕಟ್ಟೆ ನಿರ್ಮಾಣ, ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಣಸಿನಕಾಯಿ ಸಂಶೋಧನಾ ಕೇಂದ್ರ ಸ್ಥಾಪನೆ, ಉತ್ತರ ಕರ್ನಾಟಕದ 6 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸಲು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರ ಜಾರಿಗೆ ಯೋಜನೆ ಕೈಗೊಳ್ಳಲಾಗಿದೆ.
ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಕೆರೆಗಳಿಗೆ ನೀರು ಹರಿಸುವ ಯೋಜನೆಗಳು. ರಾಜ್ಯದ ಎಲ್ಲ ಏತ ನೀರಾವರಿ ಯೋಜನೆಗಳ ಸೂಕ್ತ ನಿರ್ವಹಣೆಗೆ ಯೋಜನೆ. ಏತ ನೀರಾವರಿ ಮೂಲಕ ರಾಜ್ಯದ 5 ಲಕ್ಷ ಹೆಕ್ಟೇರ್ ಭೂಮಿಗೆ ಹೆಚ್ಚುವರಿ ನೀರಾವರಿ ಒದಗಿಸುವ ಗುರಿ. ಬೇಡ್ತಿ – ವರದಾ ನದಿ ಜೋಡಣೆ ಯೋಜನೆ ಅನುಷ್ಠಾನ ಯೋಜನೆ. ಇವುಗಳಲ್ಲಿ ಕೆಲವು ಪ್ರಮುಖ ಯೋಜಗಳಿಗೆ ಕೇಂದ್ರ ಸರಕಾರದ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದ ನಂತರ ಆಧ್ಯತೆ ಮೇರೆ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ ಎನ್ನಲಾಗಿದೆ.
ಬೆಂಗಳೂರು ಅಭಿವೃದ್ಧಿಗೆ: ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ 234 ಕೆರೆಗಳಿಗೆ ಬೆಂಗಳೂರು ನಗರದ ವೃಷಭಾವತಿ ಕಣಿವೆಯಿಂದ ದ್ವಿತೀಯ ಹಂತಕ್ಕೆ ಸಂಸ್ಕರಿಸಿದ 308 ಎಂಎಲ್ಡಿ ನೀರು ತುಂಬಿಸುವ 500 ಕೋಟಿ ರೂ. ಯೋಜನೆ ಅನುಷ್ಠಾನ.ಬೆಂಗಳೂರು ನಗರ ಅಭಿವೃದ್ಧಿಗೆ 7795 ಕೋಟಿ ರೂ ಮೀಸಲುಬೆಂಗಳೂರಿನಲ್ಲಿ ನಿರ್ಭಯಾ ಯೋಜನೆಯಲ್ಲಿ ನಗರಾದ್ಯಂತ 7,500 ಸಿಸಿ ಕ್ಯಾಮರಾಗಳ ಅಳವಡಿಕೆ. ಬಿಎಂಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ರಿಯಾಯಿತಿ ದರದ ಬಸ್ ಪಾಸ್. ‘ವನಿತಾ ಸಂಗಾತಿ’ ಬಸ್ ಪಾಸ್ ಹೆಸರಿನಲ್ಲಿ ಈ ಯೋಜನೆ ಜಾರಿ.ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಕರ್ನಾಟಕ ಸಂಸ್ಕೃತಿ ಕೇಂದ್ರ ಸ್ಥಾಪನೆ. ಬೈಯಪ್ಪನಹಳ್ಳಿ ವೃಕ್ಷೋದ್ಯಾನ ಆರಂಭ, ಬೆಂಗಳೂರು ನಗರದಲ್ಲಿ 67 ಕಿ. ಮೀ. ಫೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ. ರಾಜ್ಯದಲ್ಲಿ ಹೊಸದಾಗಿ 52 ಬಸ್ ನಿಲ್ದಾಣಗಳ ಸ್ಥಾಪನೆ. ಉಪ ನಗರ ರೈಲು ಯೋಜನೆಗೆ 15,767 ಕೋಟಿ ರೂ. ಅನುದಾನ. ಬೆಂಗಳೂರಿನ ಓಕಳೀಪುರಂನಲ್ಲಿ ರೇಷ್ಮೆ ಇಲಾಖೆಗೆ ಸೇರಿದ ಕಟ್ಟಡದಲ್ಲಿ ರೇಷ್ಮೆ ಇಲಾಖೆಯ ಎಲ್ಲಾ ಕಚೇರಿ ಒಂದೇ ಕಡೆ ಇರುವಂತೆ ರೇಷ್ಮೆ ಭವನ ಸ್ಥಾಪನೆ. ಬೆಂಗಳೂರು ಉತ್ತರ ಭಾಗದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ. 45 ಲಕ್ಷ ರೂ. ತನಕ ಫ್ಲ್ಯಾಟ್ಗಳನ್ನು ಖರೀದಿ ಮಾಡುವಾಗ ಮುದ್ರಾಂಕ ಶುಲ್ಕವನ್ನು ಪಾವತಿ ಮಾಡಬೇಕಿಲ್ಲ. ಬೆಂಗಳೂರು ನೀರು ಸರಬರಾಜು ಒಳಚರಂಡಿ ಮಂಡಳಿ ವತಿಯಿಂದ ಬಿಬಿಎಂಪಿ ಸಹಯೋಗದೊಂದಿಗೆ 450 ಕೋಟಿ ವೆಚ್ಚದಲ್ಲಿ ಕೆಸಿ ವ್ಯಾಲಿ ಆವರಣದ 248 ಎಂಎಲ್ಡಿ ಸಾಮರ್ಥ್ಯದ ಎಸ್ಟಿಪಿ ಪುನರುಜ್ಜೀವನ ಮತ್ತು ಉನ್ನತೀಕರಣಕ್ಕೆ ಕ್ರಮ.ಆಗಸ್ಟ್ 2021ರೊಳಗೆ ಒಂದು ರಾಷ್ಟ್ರ ಒಂದು ಕಾರ್ಡ್ ವ್ಯವಸ್ಥೆ ಜಾರಿಗೆ ಕ್ರಮ. ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಬೆಂಗಳೂರು ಮಹಾನಗರ ಪಾಲಿಕೆ ಸಾರಿಗೆ ಸಂಸ್ಥೆಗಳಲ್ಲಿ ಈ ಕಾರ್ಡ್ ಬಳಕೆಗೆ ಅವಕಾಶ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳಲ್ಲಿ ಆಟೊಮೆಟಿಕ್ ಫೇರ್ ಕಲೆಕ್ಷನ್ ಯೋಜನೆ ಅನುಷ್ಠಾನ. ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ 20 ಕೋಟಿ ರೂ.ಗಳ ವೆಚ್ಚದಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ 50 ಹಾಸಿಗೆ ಸಾಮರ್ಥ್ಯದ ಉಪಕೇಂದ್ರ.ಬಿಬಿಎಂಪಿಯ 57 ವಾರ್ಡ್ಗಳಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಜನಾರೋಗ್ಯ ಕೇಂದ್ರಗಳ ಸ್ಥಾಪನೆ.33 ಕೋಟಿ ರೂ. ವೆಚ್ಚದಲ್ಲಿ ಬಿಬಿಎಂಪಿ ಶಾಲೆಗಳ ನವೀಕರಣ ಹಾಗೂ ಪುನರ್ ನಿರ್ಮಾಣ ಮಾಡಲಿದೆ.
ಯಡಿಯೂರಪ್ಪ ಅವರ ಕರ್ನಾಟಕ ಬಜೆಟ್ 2021 – ಮುಖ್ಯಾಂಶಗಳು: ಎಪಿಎಂಸಿಗಳಲ್ಲಿ ಮಹಿಳೆಯರಿಗೆ ಶೇ 10ರಷ್ಟು ಮೀಸಲಾತಿ, ಪ್ರತಿ ಜಿಲ್ಲೆಯಲ್ಲೂ ಗೋಶಾಲೆ ನಿರ್ಮಾಣ, ದೇಶೀಯ ಗೋ ಸಂಪತ್ತಿನ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ತರಬೇತಿ ನೀಡಲು ಹೆಸರಘಟ್ಟದಲ್ಲಿ ಥೀಮ್ ಪಾರ್ಕ್ ,ನಂದಿ ದುರ್ಗ ಮೇಕೆ ತಳಿಗಳನ್ನು ಅಭಿವೃದ್ಧಿಪಡಿಸಿ ಉತ್ಕೃಷ್ಟ ದರ್ಜೆಯ ಹೋತ ವಿತರಿಸಲು ರೂ1 ಕೋಟಿ ಅನುದಾನ, ಪ್ರಧಾನ ಮಂತ್ರಿ ಮತ್ಸ್ಯ ಸಂಪ್ರದಾ ಯೋಜನೆಗೆ ರೂ62 ಕೋಟಿ, ಉಪನಗರ ರೈಲು ಯೋಜನೆಗೆ ರೂ 15,767 ಕೋಟಿ, ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗೆ ರೂ 900 ಕೋಟಿ, ಎತ್ತಿನ ಹೊಳೆ ಯೋಜನೆಗೆ ದೊಡ್ಡಬಳ್ಳಾಪುರ ತಾಲೂಕಿನ ಬೈರಗೊಂಡ್ಲು ಬಳಿ ನಿರ್ಮಾಣಕ್ಕೆ ಉದ್ದೇಶಿಸಿರುವ ಜಲಾಶಯ ನಿರ್ಮಾಣ ಗೊಂದಲ ಪರಿಹಾರ, ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಚಟುವಟಿಕೆಗೆ ರೂ.50 ಕೋಟಿ. ಕೈಮಗ್ಗ ನೇಕಾರರಿಗೆ ವಾರ್ಷಿಕ ಎರಡು ಸಾವಿರ ನೆರವು, ಪದ್ಮಭೂಷಣ ಡಾ.ಹೆಚ್.ನರಸಿಂಹಯ್ಯ ಗೌರವಾರ್ಥ ಗೌರಿಬಿದನೂರು ತಾಲೂಕಿನ ಹೊಸೂರಿನಲ್ಲಿ 200 ಎಕರೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ವಿಜ್ಞಾನ ಕೇಂದ್ರಕ್ಕೆ ರೂ 10 ಕೋಟಿ, ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಮೂಲಸೌಲಭ್ಯ ಸೃಜನೆ.
2021-22ನೇ ಸಾಲಿನ ರಾಜ್ಯ ಬಜೆಟ್ ಗಾತ್ರ 2 ಲಕ್ಷದ 43 ಸಾವಿರದ 734 ಕೋಟಿ ರೂಪಾಯಿ ಆಗಿದ್ದು, ಈ ಬಾರಿಯೂ ವಲಯವಾರು ವಿಂಗಡಣೆ ಮಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಮಾಡಿದರು.
ಕೃಷಿ ಮತ್ತು ಪೂರಕ ಚಟುವಟಿಕೆ, ಆರ್ಥಿಕಾಭಿವೃದ್ಧಿ, ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ, ಬೆಂಗಳೂರು ಸಮಗ್ರ ಅಭಿವೃದ್ಧಿ, ಸಂಸ್ಕೃತಿ, ಪರಂಪರೆ, ನೈಸರ್ಗಿಕ ಸಂಪನ್ಮೂಲ ಎಂದು ವಿಂಗಡನೆ ಮಾಡಿ ಮಂಡನೆ ಮಾಡಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….