ದೊಡ್ಡಬಳ್ಳಾಪುರ: ಕರೊನಾ ನಿಯಂತ್ರಿಸುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಜಾರಿ ಮಾಡಿರುವ ಜನತಾ ಕರ್ಫ್ಯೂಗೆ ತಾಲೂಕಿನಲ್ಲಿ ಮೂರನೆ ದಿನವೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜನತಾ ಕರ್ಫ್ಯೂ ವೇಳೆ ನೀಡಲಾಗಿರುವ ವಿನಾಯಿತಿ ಸ್ಥಳಗಳಾದ ಬ್ಯಾಂಕ್, ಹೋಟೆಲ್ ಮತ್ತಿತರ ಕಡೆ ಜನಜಂಗುಳಿ ಕಂಡು ಬಂದಿದ್ದು, ಮಾಹಿತಿ ತಿಳಿದ ಪೊಲೀಸರು ಜನಜಂಗುಳಿ ಚದುರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಿದರು. ಅಲ್ಲದೆ ಅನಗತ್ಯವಾಗಿ ರಸ್ತೆಗಿಳಿಯುವ ದ್ವಿಚಕ್ರ ವಾಹನ ಸವಾರರಿಗೆ ದಂಡ ವಿಧಿಸಿದರು.
ಜನತಾ ಕರ್ಫ್ಯೂ ಮೂರನೇ ದಿನದ ಅಂತ್ಯದ ವೇಳೆಗೆ ತಾಲೂಕಿನಲ್ಲಿ ಅಗತ್ಯ ವಸ್ತುಗಳ ಕೃತಕ ಅಭಾವ ಸೃಷ್ಟಿಯಾಗುತ್ತಿದ್ದು, ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಜನಸಾಮಾನ್ಯರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟಲಾರಂಬಿಸಿದೆ.
ತಾಲೂಕಿನ ಕೆಲ ಚಿಲ್ಲರೆ ಅಂಗಡಿಗಳಲ್ಲಿ ಅಗತ್ಯ ವಸ್ತುಗಳಿಗೆ ಪೂರೈಕೆ ಕೊರತೆ ನೆಪದಲ್ಲಿ, ಬೆಲೆ ಏರಿಕೆಯಾಗಿ ಜನತಾ ಕರ್ಫ್ಯೂ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ. ಅಲ್ಲದೆ ಕಾಳ ಸಂತೆಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟವಾಗುತ್ತಿದ್ದು, ತಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟ್ ಮತ್ತಿತರ ವಸ್ತುಗಳು ಮೂಲ ಬೆಲೆಗಿಂತ ಎರಡರಷ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿರುವ ಆರೋಪ ವ್ಯಾಪಕವಾಗಿದೆ.
ಕೃತಕ ಅಭಾವ ಸೃಷ್ಟಿಸಿದರೆ ಕಠಿಣ ಕ್ರಮ: ಕೋವಿಡ್-19 ಎರಡನೇ ಅಲೆ ತಡೆಗಟ್ಟಲು ಘೋಷಿಸಿರುವ ಜನತಾ ಕರ್ಫ್ಯೂ ನೆಪದಲ್ಲಿ, ಕೃತಕ ಅಭಾವ ಸೃಷ್ಟಿಸಿ ಬೆಲೆ ಏರಿಕೆ ಮಾಡುವ ಮಾರಾಟಗಾರರ ಮೇಲೆ ಅಗತ್ಯ ಸರಕುಗಳ (ಇಸಿ) ಕಾಯ್ದೆ ಅನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಬೆಲೆ ಏರಿಕೆ ಮಾಡುವ ವರ್ತಕರ ವಿರುದ್ದ ಗ್ರಾಹಕರು ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮೂಲಕ ದೂರು ನೀಡಬಹುದಾಗಿದೆ. ಅಲ್ಲದೆ ಪೊಲೀಸರು ಸಹ ಕಾರ್ಯಾಚರಣೆ ನಡೆಸಲಿದ್ದು, ಬೆಲೆ ಏರಿಕೆ ದೃಢಪಟ್ಟಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಅವರು ಹರಿತಲೇಖನಿಗೆ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…