ದೊಡ್ಡಬಳ್ಳಾಪುರ: ಕರೊನಾ ಸಂದರ್ಭದಲ್ಲಿ ಬಡ ಜನರಿಗೆ ನೆರವಾಗಲು ಮೋದಿಗಿರುವಂತೆ 56 ಇಂಚಿನ ಎದೆ ಇದ್ದರೆ ಸಾಲದು, ಆ ಎದೆಯಲ್ಲಿ ಮಾತೃ ಹೃದಯ ಇರಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕೋವಿಡ್ ಎರಡನೇ ಅಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನಪರ ಕಾಳಜಿ ಉಳ್ಳ ವ್ಯಕ್ತಿ ವೆಂಕಟರಮಣಯ್ಯ ಶಾಸಕರಾಗಿ ದೊಡ್ಡಬಳ್ಳಾಪುರಕ್ಕೆ ದೊರೆತಿರುವುದು ತಾಲೂಕಿನ ಜನರ ಅದೃಷ್ಟ. ಕಷ್ಟ ಕಾಲದಲ್ಲಿ ಎಲ್ಲರಿಗೂ ನೆರವು ನೀಡುವ ಮನಸ್ಸು ಇರುವುದಿಲ್ಲ. ಆದರೆ ವೆಂಕಟರಮಣಯ್ಯ ತಾಲೂಕಿನ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದು, ನಿರಂತರ ಮೂವತ್ತು ದಿನಗಳ ಕಾಲ ಅನ್ನ ದಾಸೋಹ ನಡೆಸಿ ಹಸಿದವರಿಗೆ ಅನ್ನ ನೀಡಿದ್ದು ಶ್ಲಾಘನೀಯ ಕಾರ್ಯವಾಗಿದೆ.
ಕರೊನಾ ಇಡೀ ವಿಶ್ವವನ್ನೆ ಕಾಡಿದ ಮಾರಿಯಾಗಿದೆ, ಜನರ ಕಷ್ಟದಲ್ಲಿ ನೆರವಾಗುವಂತೆ ರಾಜ್ಯ ಕಾಂಗ್ರೆಸ್ ಪಕ್ಷದ ಹಾಲಿ ಮಾಜಿ ಶಾಸಕರು, ಸಂಸದರಿಗೆ ಸೂಚನೆ ನೀಡಿದ್ದು ಅವರು ಸಹ ಬಡವರಿಗೆ ನೆರವು ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಶಾಸಕ ವೆಂಕಟರಮಣಯ್ಯ ದಿನಸಿ ಕಿಟ್ ವಿತರಿಸುತ್ತಿದ್ದಾರೆ ಇದು ಇವರು ಮಾಡಬೇಕಾದ ಕೆಲಸವಲ್ಲ, ಲಾಕ್‍ಡೌನ್ ಮಾಡಿದ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಸಲಹೆ ನೀಡಿದೆ ಚಾಲಕರು, ಕಾರ್ಮಿಕರು, ರೈತರೂ ಸೇರಿದಂತೆ ಎಲ್ಲರಿಗೂ 10 ಸಾವಿರ ಹಣ, 10 ಕೆಜಿ ಅಕ್ಕಿ ನೀಡುವಂತೆ ಸಲಹೆ ನೀಡಿದೆ ಆದರೆ ಕೇಳಲಿಲ್ಲ.
ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಜನರ ಕಷ್ಟ ಅರಿವಾಗುತ್ತಿಲ್ಲ. ಪೆಟ್ರೋಲ್ ಡೀಸೆಲ್, ಗ್ಯಾಸ್, ಅಡುಗೆ ಎಣ್ಣೆ ಬೆಲೆ ಏರಿಕೆ ಯಾರ ಕಾಲದಲ್ಲಿ ಇಷ್ಟು ಆಗಿರಲ್ಲಿಲ್ಲ ಆದರೆ ಮೋದಿ ಸರ್ಕಾರ ಕಾರಣ, ಬರೀ ಸುಳ್ಳು ಹೇಳುತ್ತಾ ಜನರ ಜೀವನ ಹಾಳು ಮಾಡಿದ್ದಾರೆ. ಕೋವಿಡ್ ಲಸಿಕೆ ಸುಳ್ಳು ಹೇಳುತ್ತಿದ್ದಾರೆ. ಕರೊನಾಗೆ ಮದ್ದು ವ್ಯಾಕ್ಸಿನ್ ಆಗಿದ್ದು ಎಲ್ಲರೂ ಲಸಿಕೆ ಪಡೆಯುವಂತೆ ಮನವಿ ಮಾಡಿದರು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದ್ದು, 10 ಕೆಜಿ ಅಕ್ಕಿ ನೀಡುವ ಮೂಲಕ ಬಡವರ ಹಸಿವನ್ನು ನೀಗಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಂಸದ ಎಂ.ವೀರಪ್ಪಮೋಯ್ಲಿ, ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ಸುಮಾರು ಒಂದು ಸಾವಿರ ಕಿಟ್ ವಿತರಿಸಲಾಯಿತು. ಈ ವೇಳೆ ಬಿಜೆಪಿ ಹಾಗೂ ಜೆಡಿಎಸ್ ತೊರೆದು ಅನೇಕ ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಂಡರು.
ವಿಧಾನಪರಿಷತ್ ಸದಸ್ಯ ರವಿ, ಶಾಸಕ ಬೈರತಿ ಸುರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಶಾಮಣ್ಣ, ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ಬಮೂಲ್ ನಿರ್ದೇಶಕ ಬಿ.ಸಿ.ಆನಂದ್, ಎಪಿಎಂಸಿ ಅಧ್ಯಕ್ಷ ವಿಶ್ವನಾಥ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..