ದೊಡ್ಡಬಳ್ಳಾಪುರ: ಊಟ ಖಾಲಿಯಾಗಿದೆ ಎಂದು ಹೇಳಿದಕ್ಕೆ ಕುಪಿತಗೊಂಡು ಹೋಟೆಲ್ ಮಾಲೀಕನ ಚಾಕುವಿನ ಇರಿದ ಪುಂಡನೋರ್ವ ಪರಾರಿಯಾಗಿರುವ ಘಟನೆ ಶುಕ್ರವಾರ ರಾತ್ರಿ ನಗರದಲ್ಲಿ ನಡೆದಿದೆ.
ತ್ಯಾಗರಾಜನಗರ ನಿವಾಸಿ ಚಂದ್ರಶೇಖರ್ (30) ಚಾಕು ಇರಿತಕ್ಕೊಳಗಾದ ವ್ಯಕ್ತಿಯಾಗಿದ್ದು, ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗುತ್ತಿರುವ ಆರೋಪಿ ರೌಡಿಶೀಟರ್ ಯಲ್ಲಪ್ಪ ಪರಾರಿಯಾಗಿದ್ದಾನೆ.
ಘಟನೆಯ ವಿವರ: ಚಂದ್ರಶೇಖರ್ ಹಲವು ವರ್ಷಗಳಿಂದ ಕೊಂಗಾಡಿಯಪ್ಪ ರಸ್ತೆಯಲ್ಲಿ ಹಲವು ಶಿವಗಂಗಾ ಹೆಸರಿನ ಹೋಟೆಲ್ ನಡೆಸುತ್ತಿದ್ದಾರೆ. ಶುಕ್ರವಾರ ರಾತ್ರಿ ಹೋಟೆಲ್ ಮುಗಿಸಿಕೊಂಡು 10.15ರ ಸುಮಾರಿಗೆ ಮನೆಗೆ ತೆರಳಲು ನಿಂತಿದ್ದ ವೇಳೆ ಯಲ್ಲಪ್ಪ ಬಂದು ಊಟ ಇದೆಯೇ ಎಂದು ಕೇಳಿದ್ದಾರೆ. ಇದಕ್ಕೆ ಚಂದ್ರಶೇಖರ್ ಊಟ ಖಾಲಿಯಾಗಿದೆ ಎಂದು ತಿಳಿಸಿದ್ದಾರೆ.
ಇಷ್ಟಕ್ಕೆ ಆಕ್ರೋಶಗೊಂಡ ಯಲ್ಲಪ್ಪ ಚಾಕುವಿನಿಂದ ಚಂದ್ರಶೇಖರ್ ಎದೆ ಭಾಗ ಸೇರಿದಂತೆ ಮೂರು ಬಾರಿ ಇರಿದಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಯಲ್ಲಪ್ಪನ ಜೊತೆ ಮತ್ತಿಬ್ಬರು ಇದ್ದರು ಎಂದು ಶಂಕಿಸಲಾಗಿದ್ದು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಚಾಕು ಇರಿತಕ್ಕೆ ಒಳಗಾದ ಚಂದ್ರಶೇಖರ್ ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜೈಲಿಂದ ಬಂದಿದ್ದ ಯಲ್ಲಪ್ಪ: ವೀರಭದ್ರನ ಪಾಳ್ಯದ ನಿವಾಸಿಯಾಗಿರುವ ಯಲ್ಲಪ್ಪ ರೌಡಿಶೀಟರ್ ಆಗಿದ್ದಾನೆ. ಆತನ ವಿರುದ್ದ ಜೀವಬೆದರಿಕೆ, ಸುಲಿಗೆ, ರಾಬರಿ ಸೇರಿದಂತೆ ಹಲವು ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎನ್ನಲ್ಲಾಗಿದೆ.
ಅಪರಾಧ ಕೃತ್ಯವೊಂದರಲ್ಲಿ ಜೈಲು ಸೇರಿದ್ದ ಆರೋಪಿ ಯಲ್ಲಪ್ಪ ಎರಡು ತಿಂಗಳ ಹಿಂದೆ ಜೈಲಿನಿಂದ ಜಾಮೀನಿನ ಮೇರೆಗೆ ಬಿಡುಗಡೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……