ದೊಡ್ಡಬಳ್ಳಾಪುರ: ಶುಕ್ರವಾರ ಸಂಜೆ ನಿಧನರಾದ ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ಅಂತ್ಯಕ್ರಿಯೆ ದೊಡ್ಡಬಳ್ಳಾಪುರದ ಕೊಡಿಗೇಹಳ್ಳಿ ರಸ್ತೆಯ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಕ್ಯಾಂಪಸ್ನಲ್ಲಿ ಶನಿವಾರ ಸಂಜೆ ನಡೆಯಲಿದೆ ಎಂದು ಜಾಲಪ್ಪ ಅವರ ಕುಟುಂಬದ ಮೂಲಗಳು ತಿಳಿಸಿವೆ.
ಕೋಲಾರದ ಆಸ್ಪತ್ರೆಯಿಂದ ಜಾಲಪ್ಪ ಅವರ ಪಾರ್ಥೀವಶರೀರ ಶುಕ್ರವಾರ ರಾತ್ರಿಯೇ ಜಾಲಪ್ಪ ಅವರ ಸ್ವಗ್ರಾಮವಾದ ತೂಬಗೆರೆ ಗ್ರಾಮಕ್ಕೆ ಆಗಮಿಸಲಿದೆ. ಶನಿವಾರ ಬೆಳಿಗ್ಗೆ ಸುಮಾರು 10 ಗಂಟೆವರೆಗೂ ತೂಬಗೆರೆಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಬೆಳಿಗ್ಗೆ ಮೆರವಣಿಗೆ ಮೂಲಕ ಸಾಗಿ 11 ಗಂಟೆಯ ನಂತರ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾ ವಿದ್ಯಾಲಯದಲ್ಲಿನ ಜಾಲಪ್ಪ ಕಲಾ ಮಂದಿರದಲ್ಲಿ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.
ಅಂತ್ಯಕ್ರಿಯೆಗೆ ಸಿದ್ದತೆ: ಜಾಲಪ್ಪ ಕ್ಯಾಂಪಸ್ ನಲ್ಲಿ ಅಂತ್ಯಕ್ರಿಯೆ ನಡೆಯುವ ಸ್ಥಳವನ್ನು ಸಂಜೆಯಿಂದಲೇ ಸ್ವಚ್ಛಗೊಳಿಸಿ ಸಿದ್ದತೆಗಳನ್ನು ಆರಂಭಿಸಲಾಗಿದೆ. ಅಂತ್ಯಕ್ರಿಯೆಗೆ ಗಣ್ಯವ್ಯಕ್ತಿಗಳು ಆಗಮಿಸುವ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆಯಿಂದಲೇ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಬ್ಯಾರಿಕೇಡ್ಗಳನ್ನು ಅಳವಡಿಸಲಾಗುತ್ತಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….
 
				 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						