
ದೊಡ್ಡಬಳ್ಳಾಪುರ: ದಶಕಗಳ ನಂತರ ನಗರದ ಹೃದಯಭಾಗದಲ್ಲಿನ ನಾಗರಕೆರೆ ಕೋಡಿ ಬಿದ್ದಿದೆ. ಆದರೆ ಕೆರೆಯ ಅಂಗಳದಲ್ಲಿಯೇ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಒಳಚರಂಡಿ ಪೈಪ್‌ಲೈನ್ ಕೆರೆಯ ನೀರು ಹರಿದು ಹೊರ ಹೋಗಲು ಹಾಗೂ ಕಲುಷಿತವಾಗಲು ಕಾರಣವಾಗುತ್ತಿದೆ ಎಂದು ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎ.ನಂಜಪ್ಪ ಹೇಳಿದರು.
ಅವರು ಮಂಗಳವಾರ ಒಕ್ಕೂಟದ ವತಿಯಿಂದ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಮಾತನಾಡಿ, ಕೆರೆ ಅಂಗಳದಲ್ಲಿ ಒಳಚರಂಡಿ ಪೈಪ್ ಲೈನ್ ಹಾಕುವಾಗಲೇ ಹಲವಾರು ಜನ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಸಹ ನಗರಸಭೆ ಎಂಜಿನಿಯರ್‌ಗಳು ಮುಂದಾಲೋಚನೆ ಮಾಡದೇ ಹಾಕಿರುವ ಪೈಪ್‌ಲೈನ್‌ಗಳಿಂದ ಕಲುಷಿತ ನೀರು ಹೊರ ಬಂದು ಕೆರೆಯಲ್ಲಿನ ನೀರು ಸೇರುತ್ತಿದೆ. ಇದರಿಂದಾಗಿ ಕೆರೆ ಏರಿಯ ಮೇಲೆ ವಾಯುವಿಹಾರಕ್ಕೆ ಬರುವವರು ಮೂಗುಮುಚ್ಚಿಕೊಂಡು ಓಡಾಡುವಂತಾಗಿದೆ. ನಗರಸಭೆ ಎಂಜಿನಿಯರ್‌ಗಳು ತುರ್ತಾಗಿ ಪೈಪ್‌ಲೈನ್ ಸರಿಪಡಿಸುವ ಮೂಲಕ ಕೆರೆ ನೀರು ಕಲುಷಿತವಾಗುವುದನ್ನು ತಪ್ಪಿಸಬೇಕಿದೆ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಟಿ.ಎನ್.ಶ್ರೀನಿವಾಸ್, ಪದಾಧಿಕಾರಿಗಳಾದ ನಯಾಜ್, ಎಂ.ದೇವರಾಜ್, ಎಚ್.ಎಸ್.ವೆಂಕಟೇಶ್, ಗಂಗರಾಜು, ಇಫ್ತೆಕಾರ್,ಎಂ.ಮುನೇಗೌಡ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….
 
				 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						