ದೊಡ್ಡಬಳ್ಳಾಪುರ: ಬೆಂಬಲ ಬೆಲೆ ಯೋಜನೆಯಡಿಯಲ್ಲಿರಾಗಿ ಖರೀದಿ ಮಿತಿಯನ್ನು ಸಡಿಲಗೊಳಿಸಬೇಕೆಂದು ಒತ್ತಾಯಿಸಿ ನಗರದ ಎಪಿಎಂಸಿ ಆವರಣದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಕಚೇರಿ ಮುಂದೆ ರಾಜ್ಯ ರೈತ ಸಂಘದ ವತಿಯಿಂದ ನಡೆಸುತ್ತಿರುವ ಧರಣಿ ಮೂರನೇ ದಿನವೂ ಮುಂದುವರೆದಿದೆ.
ರೈತ ಸಂಘದ ಸದಸ್ಯರು ಖರೀದಿ ಕೇಂದ್ರದ ಮುಂದೆಯೇ ಹಗಲು-ರಾತ್ರಿ ಧರಣಿ ನಡೆಸುತ್ತಿರುವ ಸ್ಥಳದಲ್ಲೇ ಅಡುಗೆಯನ್ನು ಸಹ ಸಿದ್ದಮಾಡುತ್ತಿದ್ದಾರೆ.
ಸೋಮವಾರ ಧರಣಿಗೆ ಸ್ಥಳಕ್ಕೆ ಭೇಟಿ ನೀಡಿದ್ದ ಉಪವಿಭಾಗಾಧಿಕಾರಿ ಅರುಳ್ ಕುಮಾರ್, ತಹಶೀಲ್ದಾರ್ ಮೋಹನಕುಮಾರಿ ಅವರು ಸಂಜೆ ವೇಳೆಗೆ ಸಚಿವರೊಂದಿಗೆ ಸಭೆ ನಡೆಸುವ ಕುರಿತಂತೆ ಸಮಯ ತಿಳಿಸಲಾಗುವುದು. ಧರಣಿಯನ್ನು ಹಿಂದಕ್ಕೆ ಪಡೆಯುವಂತೆ ತಿಳಿಸಿದ್ದರು. ಆದರೆ ಒಂದು ದಿನ ಕಳೆದರು ಸಹ ಅಧಿಕಾರಿಗಳು ಸಚಿವರೊಂದಿಗೆ ಸಭೆ ನಡೆಸುವ ಕುರಿತಂತೆ ರೈತರಿಗೆ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಸರ್ಕಾರದಿಂದ ಹೆಚ್ಚಿನ ರಾಗಿ ಖರೀದಿಗೆ ಅಧಿಕೃತ ಆದೇಶ ಬರುವವರೆಗೂ ರೈತ ಸಂಘದ ಸದಸ್ಯರು ಧರಣಿ ಮುಂದೆವರೆಸುವ ನಿರ್ಧಾರ ಮಾಡಿದ್ದಾರೆ.
ಧರಣಿ ಮುಂದುವರೆಸಿರುವ ಕುರಿತಂತೆ ಮಾಹಿತಿ ನೀಡಿದ ರಾಜ್ಯ ರೈತ ಸಂಘದ ಮುಖಂಡರು, ಜ.7 ರಂದು ರಾಜ್ಯ ರೈತ ಸಂಘ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ನಗರದ ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರದ ಮುಂದೆಯೇ ಸಭೆ ನಡೆಯಲಿದೆ. ಹೆಚ್ಚುವರಿ ರಾಗಿ ಖರೀದಿ ಸಮಸ್ಯೆ ಕೇವಲ ಒಂದು ತಾಲ್ಲೂಕಿಗೆ ಸೀಮಿತವಾಗಿಲ್ಲ. ಹೀಗಾಗಿ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕಿನ ರೈತ ಸಂಘದ ಮುಖಂಡರು ಹಾಗೂ ರಾಜ್ಯದ ರಾಗಿ ಬೆಳೆಯುವ ಜಿಲ್ಲೆಯ ಮುಖಂಡರು ಸಹ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ರಾಗಿ ಖರೀದಿ ಮಿತಿಯನ್ನು ಸಡಿಲಗೊಳಿಸುವಂತೆ ರೈತ ಸಂಘ ನಡೆಸುತ್ತಿರುವ ಧರಣಿಗೆ ರೈತರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಸರ್ಕಾರ ಹೆಚ್ಚೆವರಿ ರಾಗಿ ಖರೀದಿಗೆ ಕುರಿತಂತೆ ಶೀಘ್ರವಾಗಿ ನಿರ್ಧಾರ ಕೈಗೊಳ್ಳಬೇಕು. ಹಣದ ಅವಶ್ಯಕತೆ ಇರುವ ರೈತರು ಖಾಸಗಿ ವ್ಯಾಪಾರಿಗಳು ಕೇಳಿದಷ್ಟು ಬೆಲೆಗೆ ರಾಗಿ ಮಾರುವಂತಹ ಸ್ಥಿತಿ ಉಂಟಾಗುವುದನ್ನು ತಪ್ಪಿಸಬೇಕು ಎಂದು ರೈತ ಸಂಘದ ಸದಸ್ಯರು ಆಗ್ರಹಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….