ದೊಡ್ಡಬಳ್ಳಾಪುರ: ವಸತಿ ಮನೆಗಳಿಗೆ ನಿವೇಶನಕ್ಕೆ ಕಡ್ಡಾಯವಾಗಿ 5 ರಿಂದ 10 ಎಕರೆ ಸರ್ಕಾರಿ ಜಮೀನು ಮೀಸಲಿಡಬೇಕೆಂದು ಶಾಸಕ ಟಿ.ವೆಂಕಟರಮಣಯ್ಯ ಪಿಡಿಒಗಳಿಗೆ ಸೂಚನೆ ನೀಡಿದರು.
ತಾಲೂಕಿನ ಆರೂಢಿ ಗ್ರಾಮಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಜನಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ಮನೆಗಳಿಗೆ ನಿವೇಶನಕ್ಕೆ ಕಡ್ಡಾಯವಾಗಿ 5 ರಿಂದ 10 ಎಕರೆ ಸರ್ಕಾರಿ ಜಮೀನು ಮೀಸಲಿಡಬೇಕಿದೆ. ಈ ನಿಟ್ಟಿನಲ್ಲಿ ಗ್ರಾಮಪಂಚಾಯಿತಿ ಪಿಡಿಒಗಳು ತ್ವರಿತವಾಗಿ ಕಾರ್ಯಮಗ್ನರಾಗಿ ಪಟ್ಟಿಯನ್ನು ನೀಡಬೇಕೆಂದರು.
ಗ್ರಾಮಸಭೆಯಲ್ಲಿ ಸ್ವೀಕರಿಸಲಾದ ಅಹವಾಲುಗಳನ್ನು ಆಯಾ ಇಲಾಖೆ ಅಧಿಕಾರಿಗಳಿಗೆ ತ್ವರಿತವಾಗಿ ಬಗೆ ಹರಿಸಲು ಸೂಚಿಸಿದ ಅವರು, ರಸ್ತೆ ಕಾಮಗಾರಿ ಸರ್ಕಾರದ ಅನುದಾನ ಕೊರತೆ ಅಡ್ಡಿಯಾಗುತ್ತಿದೆ. ಜ.27ರಂದು ಮಧುರೆಯಲ್ಲಿ ರೈತ ಸಂಪರ್ಕ ಕೇಂದ್ರ ಉದ್ಘಾಟನೆಗೆ ಸಚಿವರು ಬರುತ್ತಿದ್ದು, ರೈತರ ಸಮಸ್ಯೆ ಬಗೆ ಹರಿಸುವಂತೆ ಹಾಗೂ ತಾಲೂಕಿನ ಅಭಿವೃದ್ಧಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದೆಂದರು.
11ಲಕ್ಷ ಸಂತೆಗೆ ಅನುದಾನ: ಆರೂಢಿ ಗ್ರಾಮದಲ್ಲಿ ನಡೆಯುವ ವಾರದ ಸಂತೆಯಲ್ಲಿ ಮಳಿಗೆಗಳ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾರ್ಯಕ್ಕೆ ರೂ 11 ಲಕ್ಷ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಗ್ರಾಮದ ಯುವಕ ರವಿಕಿರಣ್ ಮಾತನಾಡಿ, ರಾಜೀವ್ ಗಾಂಧಿ ವಸತಿ ಯೋಜನೆ, ಭಾಗ್ಯ ಜ್ಯೋತಿ ಯೋಜನೆಗೆ ಸರ್ಕಾರದಿಂದ 40 ಯೂನಿಟ್ ವರೆಗೆ ಉಚಿತ ಸೌಲಭ್ಯ ಪಕ್ಕದ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಆರೂಢಿ ಗ್ರಾಮಪಂಚಾಯಿತಿಗೆ ಈ ಸೌಲಭ್ಯವಿಲ್ಲದಿರುವುದನ್ನು ಶಾಸಕರ ಗಮನಕ್ಕೆ ತಂದರು.
ಈ ಕುರಿತು ಶಾಸಕ ಟಿ.ವೆಂಕಟರಮಣಯ್ಯ ಎಇಇ ಅವರಿಗೆ ಕರೆಮಾಡಿ ಸೌಲಭ್ಯ ನೀಡುವಂತೆ. ಅಲ್ಲದೆ ಶಾಸಕರ ಅನುದಾನದಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಗುತ್ತಿಗೆದಾರರಿಗೆ ಸೂಚಿಸಿದರು.
ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷೆ ಜಯಮ್ಮಪ್ರಭು ಮಾತನಾಡಿ, ಕೃಷಿ ಇಲಾಖೆಗೆ ಬೆಳೆ ಪರಿಹಾರಕ್ಕೆ ಸಲ್ಲಿಸಲಾದ 240 ಅರ್ಜಿಗಳಿಗೆ ಪರಿಹಾರ ಬಾರದೆ ಇದೆ. ಈ ಕುರಿತು ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಮಳೆಯಿಂದಾಗಿ ಸಾಲಸೋಲ ಮಾಡಿದ ಬೆಳೆ ಹಾಳಾಗಿದೆ. ಆದರೆ ಸರ್ಕಾರದ ಪರಿಹಾರ ದೊರಕಿಸುವಲ್ಲಿ ಅಧಿಕಾರಿಗಳು ಬೇಜವಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಕುರಿತು ಮಾತನಾಡಿ ಶಾಸಕ ಟಿ.ವೆಂಕಟರಮಣಯ್ಯ ಕೃಷಿ ಅಧಿಕಾರಿಯ ಬೇಜವಬ್ದಾರಿಯಿಂದ ರೈತರಿಗೆ ಸಮಸ್ಯೆ ಎದುರಾಗಿದೆ. ಈ ಕುರಿತು ಸಚಿವರಿಗೆ ಮನವರಿಕೆ ಮಾಡಲಾಗಿದ್ದು, ಸದನದಲ್ಲಿ ಪ್ರಸ್ತಾಪಿಸಲಾಗುವುದೆಂದರು.
ಗ್ರಾಮಪಂಚಾಯಿತಿ ಸದಸ್ಯರಾದ ಸುನೀಲ್ ಹಾಗೂ ಶ್ರೀಧರ್ ಮಾತನಾಡಿ, ಗ್ರಾಮಪಂಚಾಯಿತಿಯಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ. ಇ-ಖಾತೆ ಮಾಡಿಕೊಡಲು ಗ್ರಾಮಪಂಚಾಯಿತಿಯಿಂದ ಎರಡರಿಂದ, ಮೂರು ಸಾವಿರ ಹಣ ವಸೂಲಿ ಮಾಡುತ್ತಾರೆ. ಸದಸ್ಯರಾದ ನಾವುಗಳೇ ನೀಡುವ ಅನಿವಾರ್ಯತೆ ಇದೆ ಎಂದು ಆರೋಪಿಸಿದ್ದು, ಅಧಿಕಾರಿಗಳು ತ್ವರಿತವಾಗಿ ಕಾರ್ಯನಿರ್ವಹಿಸಲು ಸೂಚಿಸಬೇಕೆಂದರು.
ತಹಶೀಲ್ದಾರ್ ಮೋಹನಕುಮಾರಿ ಮಾತನಾಡಿ, ಗ್ರಾಮಸ್ಥರ ಅಹವಾಲುಗಳಲ್ಲಿ ಸಾಗುವಳಿ ಚೀಟಿ ವಿತರಣೆ ಪ್ರಮುಖವಾಗಿದ್ದು, ಸರ್ವೆ ಇಲಾಖೆಯೊಂದಿಗೆ ಚರ್ಚೆ ನಡೆಸಿ ಸಾಗುವಳಿ ಚೀಟಿ ವಿತರಣೆ ಮಾಡಲಾಗುವುದು.
ಬಿಪಿಎಲ್ ಕಾರ್ಡ್, ಪಿಂಚಣಿ ಸಮಸ್ಯೆಗೆ ಸಿಬ್ಬಂದಿಗಳ ಕೊರತೆ ಎದುರಾಗಿದೆ. ಈ ನಿಟ್ಟಿನಲ್ಲಿ ಸಮಸ್ಯೆ ಬಗೆ ಹರಿಸಲಾಗುವುದು ಎಂದರು.
ಸಭೆಯಲ್ಲಿ ಆರೂಢಿಯಿಂದ ಹೊಸಹಳ್ಳಿ ಮಾರ್ಗವಾಗಿ ದೊಡ್ಡಬಳ್ಳಾಪುರಕ್ಕೆ ಸಾರಿಗೆ ಸೌಲಭ್ಯ, ಸರ್ಕಾರಿ ಆಸ್ಪತ್ರೆಯನ್ನು 24×7 ಸೌಲಭ್ಯಕ್ಕೆ ಮೇಲ್ದರ್ಜೆಗೇರಿಸಲು ಮನವಿ, ಆಸ್ಪತ್ರೆಗೆ ಆಂಬುಲೆನ್ಸ್ ನೀಡಲು ಮನವಿ, ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಕಂಬಗಳ ಅಳವಡಿಕೆ, ರೈತರಿಗೆ ಬೆಸ್ಕಾಂ ಇಲಾಖೆ ವಿದ್ಯುತ್ ಸಂಪರ್ಕ ನೀಡದ ಆರೋಪ, ಅರಣ್ಯ ಇಲಾಖೆ ರೈತರ ಭೂಮಿಗೆ ಟ್ರಂಚ್ ಹಾಕಿಕೊಂಡಿದ್ದಾರೆ ಸರ್ವೆ ನಡೆಸಲು ಮನವಿ, ಕೃಷಿ ಇಲಾಖೆಯಿಂದ ಬೆಳೆ ಪರಿಹಾರಕ್ಕೆ ಸಲ್ಲಿಸಲಾದ 240 ಅರ್ಜಿಗಳಿಗೆ ಪರಿಹಾರ ಬಾರದೆ ಇರುವುದು, ಮಾಜಿ ಗ್ರಾಪಂ ಸದಸ್ಯರು ಸರ್ಕಾರಿ ಜಾಗವನ್ನು ಅತಿ ಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದಾರೆಂಬ ಆರೋಪ, ಇ-ಖಾತೆಗೆ ಗ್ರಾಮಪಂಚಾಯಿತಿಯಿಂದ ಹಣ ವಸೂಲಿ ಆರೋಪ, ಕ್ರೀಡಾಂಗಣ, ತಂಗುದಾಣ ನಿರ್ಮಾಣಕ್ಕೆ ಮನವಿ, ಪಿಂಚಣಿ, ವಸತಿ ಸೌಲಭ್ಯಕ್ಕೆ ಮನವಿಗಳು ಕೇಳಿಬಂದವು.
ತಾಪಂ ಇಒ ಮೋಹನ್, ಗ್ರಾಮಪಂಚಾಯಿತಿ ಅಧ್ಯಕ್ಷ ಜಯಮ್ಮಪ್ರಭು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್, ತೋಟಗಾರಿಕೆ ಇಲಾಖೆ ದೀಪಾ, ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕಿ ಸುಶೀಲಮ್ಮ, ಪಿಡಿಒ ಸೌಭಾಗ್ಯಮ್ಮ ಗ್ರಾಮಪಂಚಾಯಿತಿ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….