ಯಳಂದೂರು, (ಸೆ.21): ಕಾಲುವೆ ಪೊದೆಯಲ್ಲಿ ಕುಳಿತಿದ್ದ ಚಿರತೆಯನ್ನು ಸೆರೆಹಿಡಿಯುವ ಕಾರ್ಯಾಚರಣೆ ವೇಳೆ ಅರಣ್ಯ ಸಿಬ್ಬಂದಿ ಹಾರಿಸಿದ ಗುಂಡು ತಗುಲಿ ಮೂವರು ರೈತರು ಸೇರಿ 4 ಮಂದಿ ಗಾಯಗೊಂಡಿದ್ದು, ಚಿರತೆ ಮೃತಪಟ್ಟಿದೆ.
ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಮದ್ದೂರು ಗ್ರಾಮದ ಎಳೆಪಿಳ್ಳಾರಿ ದೇವಸ್ಥಾನದಿಂದ ಮಲ್ಲಿಗೆ ಹಳ್ಳಿಗೆ ಹೋಗುವ ಕಾಲುವೆ ಬಳಿ ಶುಕ್ರವಾರ ಚಿರತೆಯನ್ನು ನೋಡಿದ ರೈತರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದರು.
ಚಿರತೆಯನ್ನು ಸೆರೆಹಿಡಿಯುವಾಗ ಏಕಾಏಕಿ ದಾಳಿಗೆ ಯತ್ನಿಸಿತು.
ಈ ವೇಳೆ ಅರಣ್ಯ ಸಿಬ್ಬಂದಿ ಆತ್ಮರಕ್ಷಣೆಗೆ ಗುಂಡು ಹಾರಿಸಿದ್ದು, ರೈತರಾದ ಶಿವಮೂರ್ತಿ, ರಂಗಸ್ವಾಮಿ, ಜಿ.ಮೂರ್ತಿ ಹಾಗೂ ಅರಣ್ಯ ಸಿಬ್ಬಂದಿ ಎಸ್.ರವಿ ಅವರಿಗೆ ತಗುಲಿದೆ.
ಗಾಯಗೊಂಡವರಿಗೆ ಕೊಳ್ಳೇಗಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕಾರ್ಯಾಚರಣೆ ವೇಳೆ ಬೈಕ್‌ನ ಬಳಿ ಚಿರತೆಯೂ ಮೃತಪಟ್ಟಿದೆ.