ಪಾವಗಡ, (ಸೆ.21): ತಂದೆಯ ಸಾವಿನ ನೋವು ಒಂದು ಕಡೆಯಾದರೆ, ಕೊನೆಯ ಕ್ಷಣದಲ್ಲಿ ಗೌರವಯುತವಾಗಿ ಬೀಳ್ಕೊಡಲು ಆಗುತ್ತಿಲ್ಲ ಎಂಬ ಕೊರಗಿನಿಂದಲೇ ತಂದೆಯ ಶವವನ್ನು ಬೈಕ್ ನಲ್ಲಿ ಸಾಗಿಸದ ದೃಶ್ಯ ಮನ ಕಲಕುವಂತಿತ್ತು.
ಹೌದು ಸೂಕ್ತ ಸಮಯದಲ್ಲಿ ಆಂಬುಲೆನ್ಸ್ ದೊರೆಯದೆ ಮಕ್ಕಳು ತಮ್ಮ ತಂದೆಯ ಮೃತದೇಹವನ್ನು ಬೈಕ್ನಲ್ಲೇ ಸಾಗಿಸಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ವೈ ಎನ್ ಹೊಸಕೋಟೆಯಲ್ಲಿ ನಡೆದಿದೆ.
ವಯೋಸಹಜ ಕಾಯಿಲೆಯಿಂದ ದಳವಾಯಿ ಹಳ್ಳಿ ಗ್ರಾಮದ ಗುಡುಗುಲ್ಲ ಹೊನ್ನೂರಪ್ಪ ಎನ್ನುವ 80 ವರ್ಷದ ವ್ಯಕ್ತಿ ಅಸ್ವಸ್ಥಗೊಂಡಿದ್ದರು.
ಕೂಡಲೇ ಮಕ್ಕಳು, ಹೊನ್ನೊರಪ್ಪನವರನ್ನ 108 ಆಂಬ್ಯುಲೆನ್ಸ್ ನಲ್ಲಿ ವೈ.ಎನ್ ಹೊಸಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದಾರೆ. ಆದರೆ ಅಷ್ಟರಾಗಲೇ ಹೊನ್ನೂರಪ್ಪನ ಜೀವ ಹೋಗಿದೆ. ಬಳಿಕ ಮೃತ ಶರೀರವನ್ನು ಮನೆಗೆ ಸಾಗಿಸಲು 108 ಆಂಬ್ಯುಲೆನ್ಸ್ ಸಿಬ್ಬಂದಿ ನಿರಾಕಿಸಿದ್ದಾರೆ. ಮೃತದೇಹವನ್ನು ಆಂಬ್ಯುಲೆನ್ಸ್ನಲ್ಲಿ ಸಾಗಿಸುವಂತಿಲ್ಲ ಎಂದಿದ್ದಾರೆ.
ಕೈಯಲ್ಲಿ ಹಣವಿಲ್ಲದೇ ಕೊನೆಗೆ ಹೊನ್ನೂರಪ್ಪ ಮಕ್ಕಳಾದ ಗೋಪಾಲಪ್ಪ ತಮ್ಮ ತಂದೆಯ ಮೃತದೇಹವನ್ನು ಭುಜದ ಮೇಲೆ ಹೊತ್ತು ಕಣ್ಣೀರು ಸುರಿಸುತ್ತ ಆಸ್ಪತ್ರೆಯಿಂದ ಹೊರ ಬಂದರು.
ವಿಧಿಯಿಲ್ಲದೆ ತಂದೆ ಶವವನ್ನು ಬೈಕ್ ನಲ್ಲೇ ತೆಗೆದುಕೊಂಡು ಮನೆಗೆ ಹೋಗಿದ್ದಾರೆ.
ನೋಟೀಸ್: ಈ ವಿಚಾರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದನ್ನು ಗಮನಿಸಿದ ಮುಖ್ಯಮಂತ್ರಿಗಳ ಕಚೇರಿಯ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ತಕ್ಷಣವೇ ಪರಿಶೀಲಿಸಿ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು.
ಅದರಂತೆ ಸದರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದ್ದು, ವೈದ್ಯರು ಈ ಬಗ್ಗೆ ವರದಿ ನೀಡಿದ್ದಾರೆ. ರೋಗಿಯ ಸಂಬಂಧಿಕರು ಮೃತ ದೇಹವನ್ನು ಸಾಗಿಸಲು ತುರ್ತು ವಾಹನದ ವ್ಯವಸ್ಥೆ ಮಾಡಲು ಕೋರಿದ್ದರು. ಆಂಬುಲೆನ್ಸ್ ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಸಾಗಿಸಲು ಮಾತ್ರ ಸರ್ಕಾರದ ಆದೇಶವಾಗಿದ್ದು, ಮೃತಪಟ್ಟ ವ್ಯಕ್ತಿಯನ್ನು ಸಾಗಿಸಲು ಅನುಮತಿ ಇರುವುದಿಲ್ಲ.
ಹಾಗಾಗಿ ಪಾವಗಡ ತಾಲೂಕಿನಿಂದ ವಾಹನದ ವ್ಯವಸ್ಥೆ ಮಾಡಲಾಗಿತ್ತು. ಅಷ್ಟರಾಗಲೇ ವೈದ್ಯಾಧಿಕಾರಿಗಳ ಗಮನಕ್ಕೆ ಬಾರದೇ ಮೃತ ದೇಹವನ್ನು ಸ್ವ ಇಚ್ಛೆಯಿಂದ ಅವರ ಕುಟುಂಬಸ್ಥರು ತೆಗೆದುಕೊಂಡು ಹೋಗಿರುತ್ತಾರೆ ಎಂದು ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.