ದೊಡ್ಡಬಳ್ಳಾಪುರ, (ಸೆ.21): ‘ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರು ಅಪೌಷ್ಟಿಕತೆ, ರಕ್ತ ಹೀನತೆಯಿಂದ ಬಳಲುತ್ತಿರುವವರಲ್ಲಿ, ಪೌಷ್ಟಿಕತೆ ಹೆಚ್ಚಿಸಿ ಸದೃಢರನ್ನಾಗಿ ಮಾಡಲು ಪೋಷಣ್ ಮಾಸಾಚರಣೆ ಆಯೋಜಿಸಲಾಗುತ್ತಿದೆ’ ಎಂದು ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾ ಅಧಿಕಾರಿಗಳು ಅನಿತಾ ಲಕ್ಷ್ಮೀ ಹೇಳಿದರು.
ಕಸಬಾ 01 ರೋಜಿಪುರ ಅಂಗನವಾಡಿ ಕೇಂದ್ರದಲ್ಲಿ ಏರ್ಪಡಿಸಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಪೌಷ್ಟಿಕತೆಯಿಂದ ಬಳಲುವವರು ವಿವಿಧ ರೋಗಗಳಿಗೆ ಈಡಾಗುತ್ತಿದ್ದಾರೆ. ಮೊದಲು ಅವರಲ್ಲಿರುವ ಅನಾರೋಗ್ಯವನ್ನು ಗುರುತಿಸಿ ಸಕಾಲದಲ್ಲಿ ಚಿಕಿತ್ಸೆ ಹಾಗೂ ಪೌಷ್ಟಿಕ ಆಹಾರ ನೀಡುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದು ಹೇಳಿದರು.
ಸಿಡಿಪಿಒ ರವಿಕುಮಾರ್ ಮಾತನಾಡಿ, ‘ಗರ್ಭಿಣಿಯರು, ಬಾಣಂತಿಯರು, ಶಿಶುಗಳ ಅಪೌಷ್ಟಿಕತೆಯನ್ನು ತಡೆಗಟ್ಟಲು ಇಲಾಖೆಯಿಂದ ಪ್ರತಿ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಪೂರಕ ಪೌಷ್ಟಿಕ ಆಹಾರವನ್ನು ಅಂಗನವಾಡಿಗಳಲ್ಲಿನ ಮಕ್ಕಳಿಗೆ ಮತ್ತು ಇತರರಿಗೆ ತಲುಪಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರುಣ್ ಕುಮಾರ್, ಮೇಲ್ವಿಚಾರಕಿ ಪದ್ಮ, ನಗರ ಸಭೆ ಸದಸ್ಯರು ರಜನಿ ಸುಬ್ರಮಣ್ಯ, ಭಾರತ ಸೇವಾ ದಳದ ಅಧ್ಯಕ್ಷ ಮಹೇಶ್,
ಆರೋಗ್ಯ ಇಲಾಖೆಯ ಅಧಿಕಾರಿ ವೀಣಾ,
ಸರ್ಕಾರಿ ಶಾಲಾ ಶಿಕ್ಷಕಿ ನಾಗರತ್ನಮ್ಮ ಸೇರಿದಂತೆ ಕಸಬಾ- 1ನೇ ವೃತ್ತದ ಎಲ್ಲಾ ಅಂಗನವಾಡಿಯ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						