ತಿರುವನಂತಪುರ: ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆಯ ಪ್ರಸಾದ ‘ಅರವಣ ಪಾಯಸ’ದಲ್ಲಿ (Aravana) ಕೀಟನಾಶಕ ಪತ್ತೆಯಾಗಿದ್ದು, ಸದ್ಯ ಸಿದ್ದವಾಗಿರುವ 5.5 ಕೋಟಿ ರೂ. ವೆಚ್ಚದ ಪ್ರಸಾದವನ್ನು ವಿಲೇವಾರಿ ಮಾಡುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.
ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ವಿತರಿಸಲಾಗುವ ‘ಅರವಣ ಪಾಯಸ’ (Aravana) ಪ್ರಸಾದದಲ್ಲಿ ವಿಷಕಾರಿ ಅಂಶಗಳು ಕಂಡುಬಂದಿರುವುದು ಹೊಸತೊಂದು ವಿವಾದವನ್ನು ಹುಟ್ಟುಹಾಕಿದಂತಾಗಿದೆ.
ಪಾಯಸ ತಯಾರಿಕೆಯಲ್ಲಿ ಬಳಸಲಾಗುವ ಏಲಕ್ಕಿಯಲ್ಲಿ ಅನುಮತಿಸಿದ ಪ್ರಮಾಣಕ್ಕಿಂತಲೂ ಅತ್ಯಧಿಕ ಪ್ರಮಾಣದ ಕ್ರಿಮಿನಾಶಕ ಅಂಶಗಳು ಕಂಡುಬಂದಿವೆ. ಹಾಗಾಗಿ ಏಲಕಿಯನ್ನು ಬೆರೆಸಿ ತಯಾರಿಸಿದ 6.65 ಲಕ್ಷ ಕಂಟೇನರ್‌ಗಳಷ್ಟು ಅರವಣ (Aravana) ಪಾಯಸವನ್ನು ಭಕ್ತರಿಗೆ ವಿತರಿಸಲೂ ಆಗದೇ, ಹಾಗೆಯೇ ಇಡಲೂ ಆಗದಂತಹ ಇಕ್ಕಟ್ಟಿನ ಪರಿಸ್ಥಿತಿ ಸೃಷ್ಟಿಯಾಗಿದೆ.
ಹಾಗಾಗಿ ಅದಷ್ಟೂ ಪ್ರಸಾದವನ್ನು ಕಡೆಗೆ ಗೊಬ್ಬರವಾಗಿಸುವ ಆಲೋಚನೆ ಇಟ್ಟುಕೊಳ್ಳಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸೇವನೆಗೆ ಯೋಗ್ಯವಾದ ಅರವಣ (Aravana) ರೂ.5.50 ಕೋಟಿ ಮೌಲ್ಯದ್ದು ಸದ್ಯ ದೇಗುಲದ ಸಂಗ್ರಹದಲ್ಲಿದೆ. ಹಾಗಿದ್ದೂ ಅದನ್ನು ಭಕ್ತರಿಗೆ ಪ್ರಸಾದವಾಗಿ ನೀಡಲು ಬಳಸದೇ ಬೇರೆ ರೀತಿಯಲ್ಲಿ ವಿಲೇವಾರಿ ಮಾಡಬೇಕಿದೆ.
ಆ ಬಗೆಗೆ ಚಿಂತನೆ ನಡೆಸಿದ ಟ್ರಾವಂಕೂರ್ ದೇವಸ್ವಂ ಮಂಡಳಿ, ಗೊಬ್ಬರವಾಗಿ ಪರಿವರ್ತಿಸುವ ಬಗ್ಗೆ ಆಲೋಚಿಸುತ್ತಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
 
				 
															 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						