ಚಂದ್ರಪುರ ಎಂಬ ರಾಜ್ಯವನ್ನು ಧರ್ಮಪಾಲನೆಂಬ ರಾಜನು ಆಳುತ್ತಿದ್ದ. ಒಂದು ಸಲ ರಾಜಸಭೆಗೆ ಸಂಗೀತ ವಿದ್ವಾಂಸ ಬಂದ. ಅವನ ಹೆಸರು ಶೌಚಮಿತ್ರ. ತಾನು ವಿವಿಧ ಸಂಗೀತವನ್ನು ನುಡಿಸುವುದರೊಂದಿಗೆ ಸಂಗೀತ ವಾದ್ಯಗಳನ್ನು ಸಂಶೋಧಿಸಿದ್ದೇನೆ, ಇದೀಗ ಹೊಸದಾಗಿ ಆವಿಷ್ಕರಿಸಿರುವ ವಾದ್ಯವನ್ನು ಮಹಾರಾಜರೇ ಮೊದಲು ನುಡಿಸಬೇಕೆಂಬುದು ನನ್ನ ಆಸೆ.’ ಎಂದು ಹೇಳಿ ಆ ವಾದ್ಯವನ್ನು ಮಹಾರಾಜರಿಗೆ ನೀಡಿದ.
ಕಲೆಗೆ ಬೆಲೆ ನೀಡುತ್ತಿದ್ದ ರಾಜ ಸಂತಸಗೊಂಡು ಲಗುಬಗೆಯಿಂದ ಸಿಂಹಾಸನದಿಂದ ಇಳಿದುಬಂದು ಕಲಾವಿದನ ಸಂಗೀತದ ವಾದ್ಯವನ್ನು ಪಡೆದು ಆತುರದಿಂದ ಅದನ್ನು ತನ್ನ ಬಾಯಿಗೆ ಇಟ್ಟು ನುಡಿಸಲು ಮುಂದಾದ. ಅಷ್ಟರಲ್ಲಿ… ಮಂತ್ರಿ ಸುಮಂತಿ ಮಹಾರಾಜನನ್ನು ಆ ಸಂಗೀತದ ವಾದ್ಯವನ್ನು ನುಡಿಸದಂತೆ ತಡೆದ. ಮಹಾರಾಜನು ಆಕಸ್ಮಿಕ ಘಟನೆಯಿಂದ ಅವಮಾನಿತರಾಗಿ ಮಂತ್ರಿಯ ಮೇಲೆ ರೇಗಿದ.
ಮಂತ್ರಿಯು, “ಪ್ರಭುಗಳು ದಯವಿಟ್ಟು ಮನ್ನಿಸಬೇಕು. ನನಗೆ ಈ ಹೊಸ ಬಗೆಯ ಸಂಗೀತದ ಸಾಧನದ ಮೇಲೆ ಅನುಮಾನ ಮೂಡಿದೆ’ ಎಂದ. ಆ ಹೊಸ ಸಂಗೀತ ವಾದ್ಯದ ತುದಿಯಲ್ಲಿ ಬಿಳಿಯ ಪಧಾರ್ಥವನ್ನು ಲೇಪಿಸಲಾಗಿತ್ತು. ಆದರೆ ಅವನ ಸಂಗ್ರಹದಲ್ಲಿದ್ದ ಇತರೆ ಸಂಗೀತದ ವಾದ್ಯಗಳಿಗೆ ಯಾವ ಬಿಳಿಯ ಪದಾರ್ಥದ ಲೇಪನವಿರಲಿಲ್ಲ! ಅವುಗಳ ತುಲನೆ ಮಾಡುತ್ತಿದ್ದ ಮಂತ್ರಿಯನ್ನು ಕಂಡು ಶೌಚಮಿತ್ರನು ಗಡಗಡ ನಡುಗಿದ.
ಮಂತ್ರಿ ಆ ಸಂಗೀತದ ವಾದ್ಯವನ್ನು ಪರೀಕ್ಷಿಸಲು ರಾಜವೈದ್ಯರಿಗೆ ನೀಡಿದ. ಅದನ್ನು ಪರೀಕ್ಷಿಸಿದ ರಾಜವೈದ್ಯರು ಮಹಾರಾಜರತ್ತ ಮುಖ ಮಾಡಿ, “ಪ್ರಭುಗಳೇ ಸಂಗೀತ ವಾದ್ಯದ ತುದಿಯಲ್ಲಿ ಲೇಪಿಸಿದ್ದ ಬಿಳಿಯ ಪದಾರ್ಥವು ವಿಷದಿಂದ ಕೂಡಿದೆ. ಅದನ್ನು ಬಾಯಿಯಿಂದ ನುಡಿಸಿದವರು ಕೆಲವೇ ನಿಮಿಷಗಳಲ್ಲಿ ಅಸುನೀಗುತ್ತಾರೆ!’ ಎಂದುಬಿಟ್ಟರು.
ರಾಜ ಆ ಕಲಾವಿದನನ್ನು ಬಂಧಿಸಲು ಆಜ್ಞಾಪಿಸಿದ. ಅವನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ನಿಜಸಂಗತಿ ಬಯಲಾಯಿತು. ಅವನು ಶತ್ರುರಾಜ್ಯದ ಗೂಢಾಚಾರನೆಂದು ತಿಳಿದುಬಂದಿತು. ಸಮಯಪ್ರಜ್ಞೆಯಿಂದ ತನ್ನ ಜೀವ ಉಳಿಸಿದ ಮಂತ್ರಿಯನ್ನು ರಾಜ ಆಲಂಗಿಸಿಕೊಂಡನು.
ಕೃಪೆ: ರಾಜಕುಮಾರ ಭೀ. ವಗ್ಯಾನವರ
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
						 
						 
						 
						